ಬೆಂಗಳೂರಿನ ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ, ಬಿಡಿಎಗೆ ಸೇರಿದ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಹಲವು ಮನೆಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದ್ದು, ಇದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ.21): ರಾಜಧಾನಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಥಣಿಸಂದ್ರದಲ್ಲಿ ನಡೆದ ಭಾರಿ ಕಾರ್ಯಾಚರಣೆಯ ಬೆನ್ನಲ್ಲೇ, ಇಂದು ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ಬಿಡಿಎ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಜೆಸಿಬಿಗಳ ಮೂಲಕ ನೆಲಸಮ ಮಾಡಲಾಗುತ್ತಿದೆ.
25
ನಾಗದೇವನಹಳ್ಳಿಯಲ್ಲಿ ಬಿಡಿಎ ಡೆಮಾಲಿಷನ್
ಕೆಂಗೇರಿ ಉಪನಗರದ ನಾಗದೇವನಹಳ್ಳಿಯ ಸರ್ವೆ ನಂಬರ್ 39/2 ಮತ್ತು 3ರಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಬಿಡಿಎಗೆ ಸೇರಿದ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅಲ್ಲಿ ಶೆಡ್‌ಗಳು, ಗೋಡೌನ್‌ಗಳು ಹಾಗೂ ಮನೆಗಳನ್ನು ನಿರ್ಮಿಸಿದ್ದರು.
35
6 ಮನೆಗಳನ್ನು ಧ್ವಂಸ
ಈ ವಿಷಯ ತಿಳಿಯುತ್ತಿದ್ದಂತೆಯೇ ನಾಲ್ಕೈದು ಜೆಸಿಬಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಬಿಡಿಎ ಅಧಿಕಾರಿಗಳು, ಅಕ್ರಮವಾಗಿ ನಿರ್ಮಿಸಲಾಗಿದ್ದ 6 ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಇಲ್ಲಿನ ನಾಲ್ಕು ಅಂತಸ್ತಿನ ಬೃಹತ್ ಕಟ್ಟಡಕ್ಕೂ ಈಗ ತೆರವು ಭೀತಿ ಎದುರಾಗಿದೆ.
ಬಿಡಿಎ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾವು ಕಳೆದ 30 ವರ್ಷಗಳಿಂದ ಇಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದೇವೆ. ಹತ್ತಾರು ಬಾರಿ ಈ ಆಸ್ತಿ ಕೈಬದಲಾವಣೆಯಾಗಿದೆ. ಇಷ್ಟು ವರ್ಷ ಇಲ್ಲದ ಬಿಡಿಎ ಈಗ ಏಕಾಏಕಿ ಬಂದಿದೆ. ನಿನ್ನೆ ರಾತ್ರಿ ನೋಟಿಸ್ ನೀಡಿ, ಇಂದು ಬೆಳಿಗ್ಗೆಯೇ ಡೆಮಾಲಿಷನ್ ಆರಂಭಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ,' ಎಂದು ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ.
55
ಪೊಲೀಸ್ ಬಂದೋಬಸ್ತ್
ಬಿಡಿಎ ಅಧಿಕಾರಿಗಳ ಪ್ರಕಾರ, ಈ ಜಾಗವು ಮೊದಲೇ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. ಕಾನೂನುಬಾಹಿರವಾಗಿ ಇಲ್ಲಿ ಒತ್ತುವರಿ ಮಾಡಲಾಗಿದ್ದು, ಅಕ್ರಮ ತಡೆಗಟ್ಟಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.