ಬೆಳಗಾವಿಯಲ್ಲಿ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕ ಕೃಷ್ಣಾನಂದ ವೇರ್ಣೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಳ್ಳತನದ ನಾಟಕವಾಡಿದ್ದು, ಆತನ ಸ್ಕೂಟಿಯಲ್ಲೇ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾನಂದ ವೇರ್ಣೇಕರ್ ಬಂಧಿತ ಚಿನ್ನದ ವ್ಯಾಪಾರಿ. ಕೃಷ್ಣಾನಂದ ವೇರ್ಣೇಕರ್ ಎಂಬಾತ ಬೆಳಗಾವಿ ರಾಮದೇವ ಗಲ್ಲಿಯಲ್ಲಿ ಚಿನ್ನದಂಗಡಿ ಹೊಂದಿದ್ದು, ಚಿನ್ನದ ಸಾಲ ನೀಡುವ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
25
ದೂರು ದಾಖಲಿಸಿದ್ದ ಚಿನ್ನದಂಗಡಿ ಮಾಲೀಕ
ಜುಲೈ 17ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಬಂದ ಕೃಷ್ಣಾನಂದ್, 376 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳದ ಜೊತೆ ತೆರಳಿದ್ದರು. ಹಾಗೆಯೇ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದೆ. ಪೊಲೀಸರ ಆರಂಭದ ತನಿಖೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರ್ ಅಂಗಡಿ ಬಳಿ ಆಗಮಿಸಿರೋದು ಪತ್ತೆಯಾಗಿತ್ತು.
35
ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆ
ಪೊಲೀಸರ ತನಿಖೆಯಲ್ಲಿ ಕೃಷ್ಣಾನಂದ ವೇರ್ಣೇಕರ್ ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಯಿಂದ 45 ಸಾವಿರ ಮೌಲ್ಯದ ಬೈಕ್, 62 ಲಕ್ಷ ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83,010 ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಆರೋಪಿಯು ಕಳೆದ ಕೆಲವು ವರ್ಷಗಳಿಂದ ಚಿನ್ನದಂಗಡಿ ನಡೆಸುತ್ತಿದ್ದನು. ಜನರಿಂದ ಚಿನ್ನ ಪಡೆದು ಸಾಲ ನೀಡುವ ಬಡ್ಡಿ ವ್ಯವಹಾರ ನಡೆಸುತ್ತಿದ್ದನು. ಚಿನ್ನ-ಬೆಳ್ಳಿ ಕಳ್ಳತನವಾಗಿದೆ ಎಂದು ಜನರಿಗೆ ಮೋಸ ಮಾಡುವ ಸಂಚು ರೂಪಿಸಿರುವ ಅನುಮಾನಗಳಿವೆ.
55
ಚಾರ್ಜ್‌ಶೀಟ್ ಫೈಲ್
ಇನ್ನು ಅಂದು ರಾತ್ರಿ ಮಳಿಗೆ ಬಳಿ ಬಂದ ಸ್ಕಾರ್ಪಿಯೋ ಕಾರ್ ಯಾರದ್ದು? ಕಾರ್‌ನಲ್ಲಿ ಬಂದವರು ಯಾರು ಎಂಬುದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು. ದೂರು ದಾಖಲಿಸಿದ್ದ ಕೃಷ್ಣಾನಂದ ವೇರ್ಣೇಕರ್ ವಿರುದ್ಧ ಚಾರ್ಜ್‌ಶೀಟ್ ಫೈಲ್ ಮಾಡಲಾಗುತ್ತದೆ ಎಂದು ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.