ಕಲಬುರಗಿಯಲ್ಲಿ, ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಲೋಕಂಡೆ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ₹10,000 ನಗದು ಹಾಗೂ ಸೀರೆ, ಬಟ್ಟೆ, ಚಪ್ಪಲಿಗಳಂತಹ ವಸ್ತುಗಳನ್ನು ಲಂಚವಾಗಿ ಕೇಳಿದ ಆರೋಪದ ಮೇಲೆ ಅವರನ್ನು ಬಲೆಗೆ ಬೀಳಿಸಲಾಗಿದೆ.
ಕಲಬುರಗಿ: ಭರ್ಜರಿ ಕಾರ್ಯಾಚರಣೆ ನಡೆಸಿರುವ ಲೋಕಾಯಕ್ತ ಪೊಲೀಸರು ಲಂಚದ ಬೇಡಿಕೆ ಆರೋಪದಡಿ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರನ್ನು ಬಲೆಗೆ ಬೀಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
24
ಎಪಿಪಿ ಸಂತೋಷ್ ಕುಮಾರ್ ಲೋಕಂಡೆ
ಈತ ಲಂಚದ ರೂಪದಲ್ಲಿ ಕೇವಲ ನಗದು ಹಣವಷ್ಟೇ ಅಲ್ಲದೆ, ತನ್ನ ಹಾಗೂ ತನ್ನ ಕುಟುಂಬದವರಿಗಾಗಿ ಬಟ್ಟೆ, ಚಪ್ಪಲಿ, ಸೀರೆ ಸೇರಿ ವಿವಿಧ ವಸ್ತುಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿದೆ. ಬಂಧಿತನನ್ನು ಕಲಬುರಗಿಯ 5ನೇ ಜೆಎಂಎಫ್‌ಸಿ ನ್ಯಾಯಾಲಯದ ಎಪಿಪಿ ಸಂತೋಷ್ ಕುಮಾರ್ ಲೋಕಂಡೆ ಎಂದು ಗುರುತಿಸಲಾಗಿದೆ.
34
ಸೀರೆ, ಪ್ಯಾಂಟ್, ಚಪ್ಪಲಿ ಬೇಕಂತೆ!
ಹೈದರಾಬಾದ್ ಮೂಲದ ರಾಹುಲ್ ಎಂಬುವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಲ್ಲಿ ರಾಜಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ₹10,000 ನಗದು ಜೊತೆಗೆ 9 ಸೀರೆ, 4 ಶರ್ಟ್, 4 ಬ್ರ್ಯಾಂಡೆಡ್ ಜೀನ್ಸ್ ಪ್ಯಾಂಟ್, 1 ಜೋಡಿ ಶೂ, 4 ಮಹಿಳೆಯರ ಉಡುಪುಗಳು ಹಾಗೂ 6 ಜೋಡಿ ಮಹಿಳೆಯರ ಚಪ್ಪಲಿ ನೀಡುವಂತೆ ಒತ್ತಡ ಹೇರಿದ್ದ ಎಂದು ಆರೋಪಿಸಲಾಗಿದೆ.
ಈ ಬೇಡಿಕೆಯಿಂದ ಬೇಸತ್ತ ದೂರುದಾರ ರಾಹುಲ್ ಅವರು ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವ ವೇಳೆ ಎಪಿಪಿ ಸಂತೋಷ್ ಕುಮಾರ್ ಲೋಕಂಡೆಯನ್ನು ಬಂಧಿಸಿದ್ದಾರೆ.