ಉತ್ತರ ಕರ್ನಾಟಕ ಪ್ರವಾಸೋದ್ಯಮ: ಹಿಡಕಲ್ ಡ್ಯಾಂ ಇನ್ನು ಮುಂದೆ ಪ್ರವಾಸಿ ತಾಣ, ಉದ್ಯಾನ, ಮಕ್ಕಳ ರೈಲು, ಬೋಟಿಂಗ್, ತಾರಾಲಯ

Published : Jun 09, 2026, 12:16 PM IST

ಹಿಡಕಲ್ ಡ್ಯಾಂ ಅನ್ನು ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ಬೃಂದಾವನ ಮಾದರಿಯ 'ರಾಜಾ ಲಖಮಗೌಡ ಉದ್ಯಾನಕಾಶಿ'ಯ ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದಿ, ಮಕ್ಕಳ ರೈಲು, ಬೋಟಿಂಗ್, ತಾರಾಲಯ ಸೇರಿದಂತೆ ಹಲವು ಆಕರ್ಷಣೆಗಳು ತಲೆ ಎತ್ತಲಿವೆ.

PREV
15
ಪ್ರವಾಸಿ ತಾಣವಾಗಿ ಹಿಡಕಲ್ ಡ್ಯಾಂ ಅಭಿವೃದ್ಧಿ

ಹುಕ್ಕೇರಿ: ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವನ್ನಾಗಿ ಹಿಡಕಲ್ ಡ್ಯಾಂ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅವಿರತ ಪ್ರಯತ್ನಿಸಲಾಗುತ್ತಿದೆ. ಬರುವ ದಿನಗಳಲ್ಲಿ ಈ ಉದ್ಯಾನಕಾಶಿ ಪ್ರಮುಖ ಆಕರ್ಷಣೆಯ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಮೈಸೂರು ಬೃಂದಾವನ ಮಾದರಿಯಲ್ಲಿ ತಾಲೂಕಿನ ಹಿಡಕಲ್ ಜಲಾಶಯ ಬಳಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ರಾಜಾ ಲಖಮಗೌಡ ಉದ್ಯಾನಕಾಶಿಯ 2ನೇ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ₹20 ಕೋಟಿ ವೆಚ್ಚದಲ್ಲಿ ಮಕ್ಕಳ ಆಕರ್ಷಿಸುವ ರೈಲು ಮತ್ತು ಅದರ ಟ್ರ್ಯಾಕ್, ಆಸನಗಳ ವ್ಯವಸ್ಥೆ, ಆಹಾರ ಸಿದ್ಧಪಡಿಸುವ ಕಟ್ಟೆಗಳು, ಆವರಣ ಗೋಡೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

25
ಉಪಹಾರ ಗೃಹ ನಿರ್ಮಾಣ ಕಾಮಗಾರಿ ಟೆಂಡರ್

ನಿಯೋಜಿತ ಉದ್ಯಾನವನ ಆವರಣದಲ್ಲಿ ಕೆರೆ ಕಾಮಗಾರಿ ಮುಕ್ತಾಯಗೊಂಡಿದ್ದು, ಬೋಟಿಂಗ್ ಮತ್ತು ಜಿಪ್‌ಲೈನ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ ಹಾಗೂ ಬಿದಿರು ಜೀವ ವೈವಿದ್ಯವನ ಕಾಮಗಾರಿ ಪ್ರಗತಿಯಲ್ಲಿವೆ. ಉದ್ಯಾನಕಾಶಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ₹4.50 ಕೋಟಿ ವೆಚ್ಚದಲ್ಲಿ ಉಪಹಾರ ಗೃಹ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ತಿಳಿಸಿದರು.

ಹಿಡಕಲ್ ಜಲಾಶಯ ಮುಂಭಾಗದಲ್ಲಿ ನಿರ್ಮಾಣ ಹಂತದ ರಾಜಾ ಲಖಮಗೌಡ ಉದ್ಯಾನಕಾಶಿ ಸ್ಥಾಪಿಸಲು ಸರ್ಕಾರ ₹147 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಮೊದಲ ಹಂತದಲ್ಲಿ ರಸ್ತೆಗಳು, ವಾಹನ ನಿಲುಗಡೆ ಕಾಮಗಾರಿಗಳು ಮುಕ್ತಾಯಗೊಂಡಿವೆ. ಚಿಟ್ಟೆ ಉದ್ಯಾನವನ ಮುಕ್ತಾಯಗೊಂಡು ಈಗಾಗಲೇ ಸುಮಾರು 40 ಸಾವಿರ ಪ್ರವಾಸಿಗರು ವೀಕ್ಷಿಸಿದ್ದಾರೆ. ಇದೀಗ ಸುಮಾರು ₹20 ಕೋಟಿ ಅಧಿಕ ವೆಚ್ಚದಲ್ಲಿ 2ನೇ ಹಂತದ ಪ್ಯಾಕೆಜ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತಿಕೊಳ್ಳಲಾಗಿದೆ.

-ನಿಖಿಲ ಕತ್ತಿ, ಶಾಸಕರು.

35
ಬಿದಿರು ಸಸಿ ಮಾಡಿದ ಶಾಸಕ ನಿಖಿಲ

ಬಿದಿರು ಜೀವ ವೈವಿದ್ಯವನ ನಿರ್ಮಾಣಕ್ಕಾಗಿ ಶಾಸಕ ನಿಖಿಲ ಕತ್ತಿ ಬಿದಿರು ಸಸಿ ಮಾಡಿದರು. ಬಳಿಕ ಪ್ರಗತಿ ಹಂತದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಾಮಗಾರಿ ವೀಕ್ಷಿಸಿ ಪರಿಶೀಲಿಸಿದರು.

ನೀರಾವರಿ ನಿಗಮದ ಇಇ ಎಸ್.ಜೆ.ಕಾಂಬಳೆ, ಎಇ ಸುಬ್ಬಣ್ಣ ಕಾಮತ್, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಬಿ.ಎಲ್.ಸನದಿ, ಉದ್ಯಾನಕಾಶಿ ಯೋಜನೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಗುತ್ತಿಗೆದಾರರಾದ ರಾಜೇಂದ್ರ ದೇಸಾಯಿ, ಬಿ.ಬಿ.ಪಾಟೀಲ, ಪಿ.ಆರ್.ನಂದಗಾಂವಿ, ಬಸವರಾಜ ಗಂಗಣ್ಣವರ, ಮುಖಂಡರಾದ ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ಮಹಾನಿಂಗ ಸನದಿ, ಶಿವನಗೌಡ ಮದವಾಲ, ಬಾಹುಬಲಿ ನಾಗನೂರಿ, ಕೆಂಪಣ್ಣಾ ದೇಸಾಯಿ, ಆರ್.ಕರುಣಾಕರ, ಸುರೇಶ ತೇರಣಿ, ಪರಪ್ಪ ಮಗದುಮ್ಮ, ಎಚ್.ಎಲ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

45
ರಸ್ತೆಗಳ ಸುಧಾರಣೆಗೆ ಮೊದಲ ಆದ್ಯತೆ: ನಿಖಿಲ ಕತ್ತಿ

ಕ್ಷೇತ್ರದಲ್ಲಿ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ನಡುವಿನ ಸಂಪರ್ಕ ಸಾಧಿಸುವ ಪ್ರಮುಖ ಮಾರ್ಗಗಳನ್ನು ಸುಧಾರಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ವಿಶೇಷ ಅನುದಾನದಡಿ ₹25 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ತಾಲೂಕಿನ ಹಟ್ಟಿಆಲೂರದಿಂದ ರೈಲ್ವೆ ಗೇಟ್‌ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಾಹನಗಳು ಸುಗಮವಾಗಿ ಸಾಗಲು ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈ ದಿಸೆಯಲ್ಲಿ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಿಸಲು ಕ್ರಮ ವಹಿಸಲಾಗಿದೆ ಎಂದರು.

55
ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪಣ

ಹುಕ್ಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಜನರಿಗೆ ನೀರಾವರಿ, ಕೃಷಿ, ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪಣ ತೊಡಲಾಗಿದೆ ಎಂದು ತಿಳಿಸಿದರು.

ಪಂಚಾಯತ್‌ ರಾಜ್ ಎಂಜನೀಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರ ಶಶಿಧರ ಭೂಸಗೋಳ, ಗುತ್ತಿಗೆದಾರ ಮಲ್ಲಪ್ಪ ಬಿಸಿರೊಟ್ಟಿ, ಪಿಡಿಒ ಎನ್.ಎಸ್.ಕುಲಕರ್ಣಿ, ಮುಖಂಡರಾದ ಮಹಾಂತೇಶ ಪಂಚನ್ನವರ, ಈರಣ್ಣ ಪಾಟೀಲ, ಅಡಿವೆಪ್ಪ ಹಿರೇಹೊಳಿ, ವಿಠ್ಠಲ ಬಾಳವ್ವಗೋಳ ಮತ್ತಿತರರು ಉಪಸ್ಥಿತರಿದ್ದರು.

Read more Photos on
click me!

Recommended Stories