ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮುಕ್ತಾಯವಾಗುವಷ್ಟರಲ್ಲೇ ಎಲ್ಲರ ಹುಬ್ಬೇರುವಂತ ಪ್ರದರ್ಶನ ತೋರಿ ಸೈ ಎನಿಸಿಕೊಂಡಿದ್ದಾರೆ.
ಕೋಲ್ಕತ ನೈಟ್ ರೈಡರ್ಸ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತ ಕೇವಲ 8 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗಿದ್ದರು.
ಐಪಿಎಲ್ ಇತಿಹಾಸದಲ್ಲಿ ಸತತ 2 ಮೇಡನ್ ಓವರ್ ಬೌಲಿಂಗ್ ಮಾಡಿದ ಏಕೈಕ ಬೌಲರ್ ಎನ್ನುವ ದಾಖಲೆಗೂ ಸಿರಾಜ್ ಭಾಜನರಾಗಿದ್ದರು.
ಮೊದಲ 2 ಓವರ್‌ನಲ್ಲೇ ಸಿರಾಜ್ ಕೆಕೆಆರ್ ತಂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ತ್ರಿಪಾಠಿ, ಟಾಮ್ ಬಾಂಟನ್ ಹಾಗೂ ನಿತೀಶ್ ರಾಣಾ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದರು.
ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನದ ಬಗ್ಗೆ ಕ್ರಿಕೆಟ್ ಪಂಡಿತರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದುಬಾರಿ ಬೌಲಿಂಗ್ ಮೂಲಕ ಸಾಕಷ್ಟು ಟ್ರೋಲ್ ಆಗುತ್ತಿದ್ದ ಸಿರಾಜ್, ಇದೀಗ ತಮ್ಮ ಅಮೋಘ ಪ್ರದರ್ಶನದ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ
ಇನ್ನೊಬ್ಬರನ್ನು ಜಡ್ಜ್ ಮಾಡುವವರಿಗೆ, ಟೀಕೆ ಮಾಡುವವರಿಗೆ ಮತ್ತೊಬ್ಬರ ಸಂಕಷ್ಟ, ಪರಿಸ್ಥಿತಿಗಳು ಅರ್ಥವಾಗುವುದಿಲ್ಲ. ಕೋಟ್ಯಾಂತರ ಜನರ ಎದುರು ಆಡುವುದು ಸುಲಭದ ಮಾತಲ್ಲ.
ಪ್ರತಿಯೊಬ್ಬ ಆಟಗಾರನಿಗೂ ಒಂದು ಒಳ್ಳೆಯ ದಿನ ಹಾಗೆಯೇ ಕೆಟ್ಟ ದಿನವೆಂದು ಇರುತ್ತದೆ. ಒಮ್ಮೆ ಕೆಟ್ಟ ಬೌಲಿಂಗ್ ಪ್ರದರ್ಶನ ಮಾಡಿದ್ದಕ್ಕೆ ಆತ ಕೆಟ್ಟ ಬೌಲರ್ ಎಂದರ್ಥವಲ್ಲ ಎಂದು ಸಿರಾಜ್ ಅರ್‌ಸಿಬಿ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಟೀಕಾಕಾರರ ಬಗ್ಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನೀಡಿದ ಮುತ್ತಿನಂಥ ಮಾತನ್ನು ನೆನಪಿಸಿಕೊಂಡಿದ್ದಾರೆ.
ಜನರ ಅಥವಾ ಟೀಕಾಕಾರರ ಬಗ್ಗೆ ನೀನು ಹೆಚ್ಚು ತಲೆಕೆಡಿಸಿಕೊಳ್ಳಬೇಡ ಧೋನಿ ಯಾವಾಗಲೂ ಹೇಳುತ್ತಿದ್ದರು. ನೀನು ಕೆಟ್ಟ ಪ್ರದರ್ಶನ ತೋರಿದರೆ ನಿನ್ನ ಮೇಲೆ ಟೀಕೆಗಳ ಸುರಿಮಳೆ ಸುರಿಸುತ್ತಾರೆ. ನೀನು ಅದರ ಬಗ್ಗೆಯೇ ಹೆಚ್ಚು ಯೋಚಿಸುತ್ತಾ ಕುಳಿತರೆ ಹುಚ್ಚನಾಗಿ ಬಿಡುತ್ತೀಯ.
ಇದರ ಬದಲು ಮುಂದಾಗುವ ಪಂದ್ಯಗಳ ಬಗ್ಗೆ ಯೋಚಿಸು. ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಈ ಹಿಂದೆ ಯಾರೆಲ್ಲಾ ನಿನ್ನ ಟೀಕಿಸಿದ್ದರೋ ಅವರೇ ನಿನ್ನನ್ನು ಹೊತ್ತು ಮೆರೆಸುತ್ತಾರೆ. ಹೀಗಾಗಿ ಇಂತವರನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಮಹಿ ಅಣ್ಣ ಹೇಳುತ್ತಿದ್ದರು ಎಂದು ಸಿರಾಜ್ ಧೋನಿಯ ಸ್ಪೋರ್ತಿದಾಯಕ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.