ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಮಹಾರಾಷ್ಟ್ರ ಸರ್ಕಾರವು ಲಗ್ನಪತ್ರಿಕೆಗಳ ಮೇಲೆ ವಧು-ವರರ ಜನ್ಮದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸುವ ನಿಯಮವನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ.
ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ನಮ್ಮ ನೆರೆರಾಜ್ಯವಾದ ಮಹಾರಾಷ್ಟ್ರ ಸರ್ಕಾರ ಮಹತ್ತರ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ. ಇನ್ಮುಂದೆ ರಾಜ್ಯದಲ್ಲಿ ಮುದ್ರಿಸಲಾಗುವ ಎಲ್ಲಾ ಲಗ್ನಪತ್ರಿಕೆಗಳ (Wedding Cards) ಮೇಲೆ ವಧು ಮತ್ತು ವರರ ಹುಟ್ಟಿದ ದಿನಾಂಕವನ್ನು (Date of Birth) ಕಡ್ಡಾಯವಾಗಿ ನಮೂದಿಸುವ ನಿಯಮವನ್ನು ಜಾರಿಗೆ ತರಲು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಬುಧವಾರ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕಾರೆ ಈ ವಿಷಯ ತಿಳಿಸಿದ್ದಾರೆ.
25
ರಾಜಸ್ಥಾನದ ಹಾದಿಯಲ್ಲೇ ನೆರೆರಾಜ್ಯ
ಲಗ್ನಪತ್ರಿಕೆಯಲ್ಲಿ ವಧು-ವರರ ಜನ್ಮದಿನಾಂಕವನ್ನು ಮುದ್ರಿಸುವುದನ್ನು ಈಗಾಗಲೇ ಭಾರತದಲ್ಲೇ ಮೊದಲ ಬಾರಿಗೆ ರಾಜಸ್ಥಾನ ಸರ್ಕಾರ ಜಾರಿಗೆ ತಂದಿದೆ. ಈಗ ಇದೇ ಕಠಿಣ ಕ್ರಮವನ್ನು ಮಹಾರಾಷ್ಟ್ರದಲ್ಲೂ ಜಾರಿಗೆ ತರಲು ಅಲ್ಲಿನ ಸರ್ಕಾರ ಮುಂದಾಗಿದೆ. ಈ ಕುರಿತು ಮಾಹಿತಿ ಪಡೆಯಲು ಈಗಾಗಲೇ ರಾಜಸ್ಥಾನ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕಾನೂನು ಮತ್ತು ನ್ಯಾಯಾಂಗ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಇದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.
35
ದಾಖಲೆಯ 1,434 ಬಾಲ್ಯವಿವಾಹಗಳ ತಡೆ!
ಕಳೆದ ಕೆಲವು ವರ್ಷಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಿದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು, ಬಾಲ್ಯ ವಿವಾಹಗಳ ಸಂಖ್ಯೆಯೇ ಹೆಚ್ಚುತ್ತಿದೆ ಎಂದು ಅರ್ಥೈಸಬಾರದು. ಬದಲಿಗೆ, ಸರ್ಕಾರದ ಇಲಾಖೆಗಳು ಹೆಚ್ಚು ಜಾಗರೂಕತೆಯಿಂದ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ, ವರದಿ ಮಾಡುತ್ತಿರುವುದರ ಸಂಕೇತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಅಧಿಕಾರಿಗಳು ದಾಖಲೆಯ 1,434 ಬಾಲ್ಯವಿವಾಹಗಳನ್ನು ತಡೆದಿದ್ದು, 136 ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸಚಿವೆ ಅದಿತಿ ತತ್ಕಾರೆ ಅವರು ಮಾಹಿತಿ ನೀಡಿದರು.
ಬಾಲ್ಯವಿವಾಹ ತಡೆ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದ್ದು, ಕೇವಲ ಹೆತ್ತವರು ಅಥವಾ ಹುಡುಗ-ಹುಡುಗಿಯ ಕುಟುಂಬದವರ ವಿರುದ್ಧ ಮಾತ್ರವಲ್ಲದೆ, ಇಂತಹ ಮದುವೆಗಳನ್ನು ಗೊತ್ತಿದ್ದೂ ನೆರವೇರಿಸುವ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಅಪ್ರಾಪ್ತರಿಗೆ ಮದುವೆ ಮಾಡಿಸುವ ಪುರೋಹಿತರು, ಮದುವೆಯಲ್ಲಿ ಪಾಲ್ಗೊಳ್ಳುವ ವಾದ್ಯದವರು, ಶಾಮಿಯಾನದವರು ಮತ್ತು ಮದುವೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸುವವರ ವಿರುದ್ಧವೂ ಇನ್ಮುಂದೆ ಕಠಿಣ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದರು.
55
ಕರ್ನಾಟಕಕ್ಕೂ ಬರಲಿದೆಯೇ ಇಂತಹ ನಿಯಮ?
ಕರ್ನಾಟಕದಲ್ಲೂ ಕೂಡ ಉತ್ತರ ಕರ್ನಾಟಕ ಭಾಗ ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸದ್ದಿಲ್ಲದೆ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಕಷ್ಟು ಮದುವೆಗಳನ್ನು ತಡೆಯುತ್ತಿದ್ದಾರೆ. ಈಗ ನೆರೆರಾಜ್ಯ ಮಹಾರಾಷ್ಟ್ರ ಇಂತಹದೊಂದು ಕ್ರಾಂತಿಕಾರಿ ನಿಯಮ ಜಾರಿಗೆ ತರುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರ ಕೂಡ ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಲಗ್ನಪತ್ರಿಕೆಯಲ್ಲಿ ವಯಸ್ಸಿನ ಪುರಾವೆ ಅಥವಾ ಹುಟ್ಟಿದ ದಿನಾಂಕ ಮುದ್ರಿಸುವುದನ್ನು ಕಡ್ಡಾಯಗೊಳಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ