16 ಕೋಟಿ ಮೊತ್ತದ ಚಿಕಿತ್ಸೆ, ಅಸಂಖ್ಯಾತ ಮಂದಿಯ ಪ್ರಾರ್ಥನೆ: ಕರಗಲಿಲ್ಲ ಯಮರಾಯ!

First Published Aug 3, 2021, 5:10 PM IST

ಅದೆಷ್ಟೇ ಯತ್ನಿಸಿದರೂ ಮನುಷ್ಯನ ಆಯುಷ್ಯ ಮುಗಿಯುತ್ತಿದ್ದಂತೆಯೇ ಸಾವನ್ನಪ್ಪುತ್ತಾನೆ. ಚಿಕಿತ್ಸೆಗಾಗಿ ಲಕ್ಷ ಲಕ್ಷ ಸುರಿದರೂ ಒಂದು ದಿನ ಇಹಲೋಕ ತ್ಯಜಿಸಲೇಬೇಕು. ಸದ್ಯ ಇಂತಹುದೇ ಮಾರ್ಮಿಕ ಸುದ್ದಿ ಪುಣೆಯಲ್ಲಿ ವರದಿಯಾಗಿದೆ. ಅಲ್ಲಿ 11 ತಿಂಗಳ ಹೆಣ್ಣು ಮಗುವನ್ನು ಉಳಿಸಲು, ಆಕೆಗೆ ಅಮೆರಿಕದಿಂದ 16 ಕೋಟಿ ಮೊತ್ತದ ಇಂಜೆಕ್ಷನ್ ತರಿಸಲಾಗಿತ್ತು, ಮಗುವಿನ ಆರೋಗ್ಯಕ್ಕಾಗಿ ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದರು. ಸರ್ಕಾರ ಕೂಡ ಎಲ್ಲ ರೀತಿಯಿಂದಲೂ ಸಹಾಯ ಮಾಡಿತು, ಆದರೆ ಇದ್ಯಾವುದೂ ಫಲ ಕೊಡಲಿಲ್ಲ, ಆ ಮುದ್ದು ಕಂದಮ್ಮ ಇಹಲೋಕ ತ್ಯಜಿಸಿದೆ.

ನಿಂತಿತು ಮುದ್ದು ಕಂದನ ಉಸಿರು

ವಾಸ್ತವವಾಗಿ, 11 ತಿಂಗಳ ವೇದಿಕಾ ಶಿಂಧೆ ಆರೋಗ್ಯ ಭಾನುವಾರ ಹಠಾತ್ತನೆ ಹದಗೆಟ್ಟಿತು, ನೋಡ ನೋಡುತ್ತಿದ್ದಂತೆಯೇ ಕಂದಮ್ಮ ಉಸಿರಾಡಲು ಕಷ್ಟಪಟ್ಟಿದೆ. ಅದೇಗೋ ಆ ಕಂದನನ್ನು ರಾತ್ರಿಯೇ ಪುಣೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಜೀವನ್ಮರಣ ಸ್ಥಿತಿಯಲ್ಲಿದ್ದ ಮಗು ರಾತ್ರಿ ಕೊನೆಯುಸಿರೆಳೆದಿದೆ. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆಯೇ ಜನರು ಭಾವುಕಗೊಂಡಿದ್ದಾರೆ. ಅನೇಕ ಮಂದಿ ಸಾಮಾಜಿಕ ಜಾಲತಾಣದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪುಟ್ಟ ಕಂದನ ಆರೋಗ್ಯಕ್ಕಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿತ್ತು

ವೇದಿಕಾ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌ ನಿವಾಸಿ ಸೌರಭ್ ಶಿಂಧೆ ಮಗಳು. ಅವಳು'SMA Type 1' ಎಂಬ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಸಮಸ್ಯೆಗೆ ಭಾರತದಲ್ಲಿ ಚಿಕಿತ್ಸೆ ಲಭ್ಯವಿಲ್ಲ, ಚಿಕಿತ್ಸೆ ಕೊಡುವುದಾದರೂ ಔಷಧಗಳನ್ನು ವಿದೇಶದಿಂದ ತರಿಸಬೇಕು. ಹೀಗಿರುವಾಗ ಮುಗ್ಧ ವೇದಿಕಾ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿತ್ತು. ಆಕೆಯ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದರು.

ಸಂಭ್ರಮದಿಂದಿತ್ತು ಕುಟುಂಬ... ಆದರೆ

ತಮ್ಮ ಮಗುವಿನ ಆರೋಗ್ಯಕ್ಕಾಗಿ, ಪೋಷಕರು ಸಾಮಾಜಿಕ ಮಾಧ್ಯಮದಲ್ಲಿ ಸಹಾಯ ಮಾಡುವಂತೆ ಕೋರಿ, ಕ್ರೌಡ್‌ಫಂಡಿಂಗ್‌ನಿಂದ ಆರಂಭಿಸಿ 16 ಕೋಟಿ ರೂ. ಒಗ್ಗೂಡಿಸಿದ್ದರು. ಬಳಿಕ ಇದರ ಚಿಕಿತ್ಸೆಗಾಗಿ ನೀಡುವ ಜೊಲ್ಜೆನ್ಸ್ಮಾ ಹೆಸರಿನ ಚುಚ್ಚುಮದ್ದನ್ನು ಅಮೆರಿಕದಿಂದ ತರಲು ಆದೇಶಿಸಲಾಗಿದೆ. ಇದಷ್ಟೇ ಅಲ್ಲದೇ, ಜೂನ್ 16 ರಂದು ಈ ಇಂಜೆಕ್ಷನ್ ಕಂದನಿಗೆ ನಿಡಲಾಗಿತ್ತು. ಹೀಗಾಗಿ ಇನ್ನು ಮಗುವಿಗೆ ಏನೂ ಆಗುವುದಿಲ್ಲ ಎಂದು ಮನೆಯವರು ತುಂಬಾ ಸಂತೋಷಪಟ್ಟಿದ್ದರು, ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಮಗಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದ ಹೆತ್ತವರು

ದಂಪತಿ ತಮ್ಮ ಮಗುವನ್ನು ಉಳಿಸಿಕೊಳ್ಳಲು ಶಕ್ತ ಮೀರಿ ಯತ್ನಿಸಿದ್ದರು. ತಮ್ಮ ಎಲ್ಲ ಠೇವಣಿಗಳನ್ನು ತೆಗೆದಿದ್ದಲ್ಲದೇ ಸಂಬಂಧಿಕರಿಂದ ಸಾಲವನ್ನೂ ಪಡೆದಿದ್ದರು. ತನ್ನ ಮಗಳು ವೇದಿಕಾ ಬದುಕುಳಿಯಲಿ ಎಂಬುವುದಷ್ಟೇ ಅವರ ಆಶಯವಾಗಿತ್ತು.  ವಿದೇಶದಿಂದ ಬಂದ ಚುಚ್ಚುಮದ್ದು ಪಡೆದ ಬಳಿಕ ಸಹಾಯ ಮಾಡಿದ ಜನರಿಗೆ ತನ್ನ ಮಗಳು ಚೆನ್ನಾಗಿದ್ದಾಳೆ ಎಂದು ಹೇಳಿ ಸಂಭ್ರಮಿಸಿದ್ದರು.  ದೇವರಿಗೆ ಧನ್ಯವಾದ ಹೇಳಿದ್ದರು.

ನಮ್ಮ ಪ್ರೀತಿಯ ಕುರುಹೇ ಇಲ್ಲ, ನಾವು ಬದುಕಿದ್ದು ಏನು ಮಾಡೋದು?

ವೇದಿಕಾ ಕುಟುಂಬದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಭಾನುವಾರ ರಾತ್ರಿ ಕಂದನ ಪಾಲಿಗೆ ಕರಾಳವಾಗಿತ್ತು. ಯಮರಾಜನೂ ಕರುಣೆ ತೋರಿಸದರೆ ಕಂದನ ಜೀವನ ಪಡೆದುಕೊಂಡಿದ್ದಾನೆ. ಒಂದು ದಿನದ ಮೊದಲು ಸಂಭ್ರಮಿಸಿದ್ದ ಪೋಷಕರು ಈಗ ಮಗಳ ಫೋಟೋ ನೋಡಿ ಅಳುತ್ತಿದ್ದಾರೆ. ಗಂಡ ಮತ್ತು ಹೆಂಡತಿ ಮಗಳ ನೆನಪಿನಲ್ಲಿ ಪದೇ ಪದೇ ನಮ್ಮ ಪ್ರೀತಿಯ ಕುರುಹೇ ಇಲ್ಲವಾಗಿದೆ. ಇನ್ನು ನಾವು ಯಾಕಾಗಿ ಬದುಕುವುದು ಎಂದು ಅಳುತ್ತಿದ್ದಾರೆ. 
 

Vedika shinde

ಈ ಅಪಾಯಕಾರಿ ರೋಗ ಯಾವುದು ಎಂದು ತಿಳಿಯಿರಿ

SMA ಟೈಪ್ 1 ಅತ್ಯಂತ ಅಪಾಯಕಾರಿ ರೋಗ ಎಂದು ವೈದ್ಯರು ಹೇಳುತ್ತಾರೆ. ಮಾನವ ದೇಹದಲ್ಲಿ ಜೀನ್ ಇದೆ ಎಂದು ಹೇಳಲಾಗುತ್ತದೆ, ಇದು ಪ್ರೋಟೀನ್‌ಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಇದು ಸ್ನಾಯುಗಳು ಮತ್ತು ನರಗಳು ಬದುಕಲು ಅನುವು ಮಾಡಿಕೊಡುತ್ತದೆ. ಆದರೆ ಈ ಹುಡುಗಿಯ ದೇಹದಲ್ಲಿ ಈ ಜೀನ್ ಇರಲಿಲ್ಲ. ಅದರಿಂದಾಗಿ ದೇಹದಲ್ಲಿ ಯಾವುದೇ ಪ್ರೋಟೀನ್ ತಯಾರಾಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಿದುಳಿನ ಸ್ನಾಯುಗಳು ತೀರಾ ಕಡಿಮೆ ಕ್ರಿಯಾಶೀಲವಾಗಿದ್ದವು, ಈ ಕಾರಣದಿಂದಾಗಿ ಇತರ ಜೀವಕೋಶಗಳು ಸಹ ಸುಪ್ತವಾಗಿದ್ದವು. ವೈದ್ಯರ ಪ್ರಕಾರ, ವಂಶವಾಹಿಗಳ ಕೊರತೆಯಿಂದಾಗಿ, ಉಸಿರಾಟದಿಂದ ಆಹಾರವನ್ನು ಅಗಿಯುವವರೆಗೆ ತೊಂದರೆ ಯಾಗುತ್ತದೆ. ಅನೇಕ ವಿಧದ ಎಸ್‌ಎಮ್‌ಎ ರೋಗಗಳಿವೆ, ಆದರೆ ಈ ಕಂದನಿಗೆ ಬಂದ ರೋಗ ಟೈಪ್ 1 ಆಗಿದ್ದು, ಇದು ಅತ್ಯಂತ ಅಪಾಯಕಾರಿಯಾಗಿದೆ. 

click me!