PM Modi Italy visit: ಉತ್ಪಾದನೆದಿಂದ AI ವರೆಗೆ ಭಾರತ-ಇಟಲಿ ಹೊಸ ಒಪ್ಪಂದಗಳೇನು?

Kannadaprabha News   | Kannada Prabha
Published : May 20, 2026, 09:44 AM IST

ಭಾರತ ‘ಮಾನವ್‌’ ಯೋಜನೆ ಜಾರಿಗೊಳಿಸಿದೆ. ಇಟಲಿಯು ನೈತಿಕತೆಯ ಆಧಾರದಲ್ಲಿ ಎಐ ಅಭಿವೃದ್ಧಿಪಡಿಸುತ್ತಿದೆ. ಎರಡೂ ದೇಶ ಸೇರಿಕೊಂಡು ಕೃತಕ ಬುದ್ಧಿಮತ್ತೆಯು ಸಾಮಾಜಿಕ ಸಬಲೀಕರಣವನ್ನು ದೃಢಪಡಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ.ನರೇಂದ್ರ ಮೋದಿ ಭಾರತದ ಪ್ರಧಾನಿ 

PREV
18
ಪ್ರಧಾನಿ ಮೋದಿ ಇಟಲಿ ಭೇಟಿ

ಭಾರತ-ಇಟಲಿ ನಡುವಿನ ಸಂಬಂಧ ಈಗ ನಿರ್ಣಾಯಕ ಹಂತ ತಲುಪಿದೆ. ಸೌಹಾರ್ದಯುತ ಸ್ನೇಹದಿಂದ ಆರಂಭವಾದ ಈ ಸಂಬಂಧ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭವಿಷ್ಯದತ್ತ ಸಾಮ್ಯ ದೃಷ್ಟಿಕೋನಗಳಂತಹ ಮೌಲ್ಯಗಳಿಂದ ಇಂದು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಪರಿವರ್ತಿತವಾಗಿದೆ. ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳಾಗುತ್ತಿರುವ ಈ ಹೊತ್ತಿನಲ್ಲಿ, ಉಭಯ ದೇಶಗಳು ಉನ್ನತ ಮಟ್ಟದ ಮಾತುಕತೆ, ಆರ್ಥಿಕ ಶಕ್ತಿ, ಸೃಜನಶೀಲತೆ, ಪ್ರಾಚೀನ ನಾಗರಿಕತೆಯ ಮೌಲ್ಯಗಳ ಆಧಾರದಲ್ಲಿ ಸುಂದರ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿವೆ. ನಿರಂತರ ನಾವೀನ್ಯತೆ, ಶುದ್ಧ ಇಂಧನಕ್ಕೆ ಉತ್ತೇಜನ ಮತ್ತು ವ್ಯೂಹಾತ್ಮಕ ಸ್ವಾತಂತ್ರ್ಯದಿಂದಷ್ಟೇ 21ನೇ ಶತಮಾನದಲ್ಲಿ ದೇಶಗಳು ಸಮೃದ್ಧ ಮತ್ತು ಸುಭದ್ರವಾಗಿರಲು ಸಾಧ್ಯ ಎಂಬುದನ್ನು ಎರಡೂ ದೇಶಗಳು ಕಂಡುಕೊಂಡಿವೆ.

28
ಸದೃಢ ಉತ್ಪಾದನಾ ಸಹಕಾರ

ವಿನ್ಯಾಸ, ಉತ್ಪಾದನಾ ಪರಿಣತಿ, ವಿಶ್ವ ದರ್ಜೆಯ ಸೂಪರ್‌ ಕಂಪ್ಯೂಟರ್‌ಗಳು ಇಟಲಿಯನ್ನು ಕೈಗಾರಿಕಾ ಪವರ್‌ಹೌಸ್‌ ಮಾಡಿದರೆ, 100ಕ್ಕೂ ಹೆಚ್ಚು ಯೂನಿಕಾರ್ನ್‌ಗಳು, 2 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಭಾರತದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ, ಎಂಜಿನಿಯರಿಂಗ್ ಕೌಶಲ್ಯ, ಗಾತ್ರ, ನಾವೀನ್ಯತೆ, ಉದ್ಯಮಶೀಲ ಪರಿಸರ ವ್ಯವಸ್ಥೆಯಿದೆ. ನಮ್ಮ ಈ ಕೈಗಾರಿಕಾ ಸಾಮರ್ಥ್ಯಗಳಿಂದ ಮೌಲ್ಯ ಸೃಷ್ಟಿ ಸಾಧ್ಯವಾಗುತ್ತದೆ.

38
ಭಾರತ-ಇಟಲಿ ಮುಕ್ತ ವ್ಯಾಪಾರ ಒಪ್ಪಂದ

ಈಗಾಗಲೇ ಐರೋಪ್ಯ ಒಕ್ಕೂಟದೊಂದಿಗೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರ ಮತ್ತು ಹೂಡಿಕೆಯ ಹಾದಿಯನ್ನು ಸುಗಮಗೊಳಿಸುತ್ತವೆ. 2029ರ ಹೊತ್ತಿಗೆ ಇಟಲಿ ಮತ್ತು ಭಾರತದ ನಡುವಿನ ವ್ಯಾಪಾರವನ್ನು 2.24 ಲಕ್ಷ ಕೋಟಿ ರು.ಗೇರಿಸುವ ಗುರಿಯಿದ್ದು, ಇದಕ್ಕಾಗಿ ರಕ್ಷಣೆ, ಬಾಹ್ಯಾಕಾಶ, ಶುದ್ಧ ತಂತ್ರಜ್ಞಾನ, ಯಂತ್ರೋಪಕರಣ, ಆಟೋಮೋಟಿವ್ ಘಟಕ, ರಾಸಾಯನಿಕ, ಔಷಧ, ಜವಳಿ, ಕೃಷಿ, ಆಹಾರ, ಪ್ರವಾಸೋದ್ಯಮದಂತಹ ಕ್ಷೇತ್ರಗಳ ಮೇಲೆ ಗಮನಹರಿಸಲಾಗುವುದು.

48
ಮೇಡ್ ಇನ್ ಇಂಡಿಯಾದಂತೆ, ಮೇಡ್ ಇನ್ ಇಟಲಿ ಉತ್ಪನ್ನ

‘ಮೇಡ್‌ ಇನ್‌ ಇಟಲಿ’ ಉತ್ಪನ್ನಗಳು ಶ್ರೇಷ್ಠತೆ ಮತ್ತು ಗುಣಮಟ್ಟಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧಿ. ಇದು ಭಾರತದಲ್ಲಿ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುವ ಗುರಿ ಹೊಂದಿರುವ ‘ಮೇಕ್ ಇನ್ ಇಂಡಿಯಾ’ ದೂರದೃಷ್ಟಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಹಾಗೂ ಇವು ಪರಸ್ಪರ ಒಂದನ್ನೊಂದು ಬೆಂಬಲಿಸುತ್ತವೆ. ಇಟಾಲಿಯನ್‌ ಕಂಪನಿಗಳು ಭಾರತಕ್ಕೆ ಪೂರೈಸಲು ಸರಕುಗಳನ್ನು ಉತ್ಪಾದಿಸುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿವೆ ಮತ್ತು ಭಾರತೀಯ ಕಂಪನಿಗಳು ಇಟಲಿಯಲ್ಲಿ ಹೂಡಿಕೆ ಮಾಡಿ ವ್ಯವಹಾರಗಳನ್ನು ಸ್ಥಾಪಿಸುತ್ತಿವೆ. 1,000ಕ್ಕೂ ಹೆಚ್ಚು ಕಂಪನಿಗಳು ಇಂಥ ಕೆಲಸದಲ್ಲಿ ಈಗಾಗಲೇ ತೊಡಗಿವೆ.

58
ತಾಂತ್ರಿಕ ನಾವೀನ್ಯತೆ

ಭವಿಷ್ಯವು ಎಐ, ಕ್ವಾಂಟಂ ಕಂಪ್ಯೂಟಿಂಗ್, ನಿರ್ಣಾಯಕ ಖನಿಜಗಳು, ಡಿಜಿಟಲ್ ಮೂಲಸೌಕರ್ಯದಂತಹ ಕ್ಷೇತ್ರಗಳ ಮೇಲೆ ನಿಂತಿದೆ. ಭಾರತವು ಅದ್ಭುತ ಪ್ರತಿಭೆ ಮತ್ತು ನಾವೀನ್ಯತೆ ಶಕ್ತಿ ಹೊಂದಿದ್ದರೆ, ಇಟಲಿಯು ಉನ್ನತ ದರ್ಜೆಯ ಕೈಗಾರಿಕಾ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಎರಡೂ ದೇಶಗಳು ಜತೆಯಾಗಿ ಕೆಲಸ ಮಾಡುವುದು ಸೂಕ್ತ. ಈ ವಿಚಾರದಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಸಹ ಇದರಲ್ಲಿ ದೊಡ್ಡ ಪಾತ್ರ ವಹಿಸುತ್ತವೆ.

68
ಮಾನವಕೇಂದ್ರಿತ ಎಐ ಗುರಿ

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಬಹುಭಾಷಾ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಗ್ಲೋಬಲ್‌ ಸೌತ್‌ ರಾಷ್ಟ್ರಗಳನ್ನು ಒಳಗೊಂಡ ಬೆಳವಣಿಗೆಗಾಗಿ ಎಐ ಶಕ್ತಿಶಾಲಿ ಆಯುಧವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಈಗಾಗಲೇ ಭಾರತದ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಎಐ ಈಗಾಗಲೇ ತನ್ನ ಪ್ರಭಾವವನ್ನು ಜಾಗತಿಕ ಆರ್ಥಿಕತೆ ಮೇಲೆ ಬೀರುತ್ತಿದೆ. ಹೀಗಿರುವಾಗ, ಎಐ ಅಭಿವೃದ್ಧಿಯು ಜವಾಬ್ದಾರಿಯುತ ಮತ್ತು ಮಾನವ ಕೇಂದ್ರಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಇಟಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ಈ ನಿಟ್ಟಿನಲ್ಲಿ ಭಾರತ ‘ಮಾನವ್‌’ ಯೋಜನೆ ಜಾರಿಗೊಳಿಸಿದೆ. ಇಟಲಿಯು ನೈತಿಕತೆಯ ಆಧಾರದಲ್ಲಿ ಎಐ ಅನ್ನು ಅಭಿವೃದ್ಧಿಪಡಿಸುತ್ತಿದೆ. ಎರಡೂ ದೇಶ ಸೇರಿಕೊಂಡು ಕೃತಕ ಬುದ್ಧಿಮತ್ತೆಯು ಸಾಮಾಜಿಕ ಸಬಲೀಕರಣವನ್ನು ದೃಢಪಡಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ. ಸುರಕ್ಷಿತ ಡಿಜಿಟಲ್ ಸಹಕಾರ, ಸಾಮರ್ಥ್ಯವೃದ್ಧಿ ಮತ್ತು ಸೈಬರ್ ಮೂಲಸೌಕರ್ಯದಲ್ಲಿನ ಸಹಕಾರದ ಮೂಲಕ, ಪ್ರತಿಯೊಂದು ರಾಷ್ಟ್ರವೂ ಎಐನ ಪ್ರಯೋಜನ ಪಡೆಯಬಹುದಾದ ವಾತಾವರಣ ಸೃಷ್ಟಿಸಲಾಗುವುದು. ಇದು, ಈ ವರ್ಷ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆ ಮತ್ತು ಜಿ7ನ ಅಧ್ಯಕ್ಷತೆ ವಹಿಸಿಕೊಂಡಿರುವ ಇಟಲಿಯ ಉದ್ದೇಶವಾಗಿದೆ.

ಎಐ ಯಾವಾಗಲೂ ಮನುಷ್ಯರಿಗಾಗಿ ಕೆಲಸ ಮಾಡಬೇಕೇ ಹೊರತು ಮಾನವರ ಜಾಗದಲ್ಲಿ ಅಲ್ಲ. ಜನರ ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದು, ಹಕ್ಕುಗಳನ್ನು ಉಲ್ಲಂಘಿಸಿ, ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಎಐ ಬಳಸಬಾರದು. ನಾವು ಎಐ ಅನ್ನು ಎಷ್ಟು ಚೆನ್ನಾಗಿ ನಿಯಂತ್ರಿಸುತ್ತೇವೆ ಎಂಬುದರ ಮೇಲೆಯೇ ಮಾನವ ಸ್ವಾತಂತ್ರ್ಯ ಮತ್ತು ಘನತೆ ನಿರ್ಧರಿತವಾಗುತ್ತದೆ.

78
ಬಾಹ್ಯಾಕಾಶ, ರಕ್ಷಣೆಯಲ್ಲಿ ಸಹಕಾರ

ಬಾಹ್ಯಾಕಾಶ ಅನ್ವೇಷಿಸಿ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿ ಮತ್ತು ಇಟಲಿಯ ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾವೀಣ್ಯತೆಯು ಜಂಟಿ ಉಪಕ್ರಮಗಳು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುತ್ತದೆ.

ರಾಷ್ಟ್ರಗಳ ಸಮೃದ್ಧಿಗೆ ಭದ್ರತೆ ಮತ್ತು ಸ್ಥಿರತೆಯೂ ಅತ್ಯಗತ್ಯ. ರಕ್ಷಣೆ, ಭದ್ರತೆ ಮತ್ತು ತಂತ್ರಜ್ಞಾನಗಳಂಥ ಕ್ಷೇತ್ರಗಳಲ್ಲಿ ಇಟಲಿ ಮತ್ತು ಭಾರತ ತಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಿವೆ. ನಮ್ಮ ಸಹಯೋಗವು ನಿರ್ಣಾಯಕ ಸಮುದ್ರ ಮಾರ್ಗಗಳ ಸುರಕ್ಷತೆ ಖಚಿತಪಡಿಸಿಕೊಳ್ಳುವಿಕೆ, ಭಯೋತ್ಪಾದನೆ, ಅಂತಾರಾಷ್ಟ್ರೀಯ ಅಪರಾಧ ಜಾಲ, ಮಾದಕ ವಸ್ತು ಕಳ್ಳಸಾಗಣೆ, ಸೈಬರ್ ಅಪರಾಧ ಮತ್ತು ಮಾನವ ಕಳ್ಳಸಾಗಣೆ ಮುಂತಾದ ಬೆದರಿಕೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ವೈವಿಧ್ಯಮಯ ಇಂಧನದತ್ತ

ವೈವಿಧ್ಯಮಯ ಇಂಧನ ಮೂಲಗಳತ್ತ ಜಗತ್ತು ಮುಖ ಮಾಡಲು ನಾವೀನ್ಯತೆ, ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ. ಭಾರತ ಮತ್ತು ಇಟಲಿ ನವೀಕರಿಸಬಹುದಾದ ಇಂಧನದಿಂದ ಹೈಡ್ರೋಜನ್ ತಂತ್ರಜ್ಞಾನಗಳವರೆಗೆ ಮತ್ತು ಸ್ಮಾರ್ಟ್ ಗ್ರಿಡ್‌ಗಳಿಂದ ವಿಪತ್ತು ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳಬಲ್ಲ ಮೂಲಸೌಕರ್ಯದವರೆಗೆ ಸಹಕರಿಸುತ್ತಿವೆ. ಭಾರತವು ಹಸಿರು ಹೈಡ್ರೋಜನ್ ರಫ್ತಿನ ಕೇಂದ್ರವಾಗುವತ್ತ ಶ್ರಮಿಸುತ್ತಿದೆ. ಇದು ನವೀಕರಿಸಬಹುದಾದ ಮೂಲಸೌಕರ್ಯದಲ್ಲಿನ ಇಟಲಿಯ ಮುಂದುವರಿದ ತಂತ್ರಜ್ಞಾನಕ್ಕೆ ಮತ್ತು ಯುರೋಪಿನ ಇಂಧನ ಪೂರೈಕೆಯ ಹೆಬ್ಬಾಗಿಲು ಆಗುವ ಕಾರ್ಯತಂತ್ರಕ್ಕೆ ಪೂರಕವಾಗಿದೆ. ಭಾರತ ನೇತೃತ್ವದ ಪ್ರಮುಖ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ), ವಿಪತ್ತು ವಿಪತ್ತು ನಿರೋಧಕ ಮೂಲಸೌಕರ್ಯಕ್ಕಾಗಿ ಒಕ್ಕೂಟ (ಸಿಡಿಆರ್‌ಐ) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟಗಳಲ್ಲಿ (ಜಿಬಿಎ)ಇತರ ದೇಶಗಳೊಂದಿಗೆ ನಮ್ಮ ಸಹಭಾಗಿತ್ವವೂ ಮುಖ್ಯವಾಗಿದೆ.

88
ಜಾಗತಿಕ ಸಂಪರ್ಕ

ಭೌತಿಕ, ಡಿಜಿಟಲ್ ಮತ್ತು ಮಾನವ ಸಂಪರ್ಕವು ಉಭಯ ದೇಶಗಳ ನಡುವೆ ನಂಟು ಬೆಸೆದಿದೆ. ಭಾರತವು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿದ್ದರೆ, ಇಟಲಿಯು ಮೆಡಿಟರೇನಿಯನ್‌ ಪ್ರದೇಶದಲ್ಲಿದೆ. ಇವೆರಡೂ ಜಾಗತಿಕ ಆರ್ಥಿಕತೆಗೆ ಬಹುಮುಖ್ಯವಾದ ಕೇಂದ್ರಗಳು ಮತ್ತು ಒಂದಕ್ಕೊಂದು ಬೆಸೆದುಕೊಂಡಿವೆ. ಈ ಮೂಲಕ, ವ್ಯಾಪಾರ, ತಂತ್ರಜ್ಞಾನ, ಇಂಧನ, ದತ್ತಾಂಶ ಮತ್ತು ಆಲೋಚನೆಗಳಿಗೆ ಹಿಂದೂ ಮಹಾಸಾಗರವನ್ನು ಯುರೋಪಿಗೆ ಜೋಡಿಸುವ ಪ್ರಮುಖ ಕಾರಿಡಾರ್ ಆಗಿ ಇಂಡೋ-ಮೆಡಿಟರೇನಿಯನ್ ರೂಪುಗೊಳ್ಳುತ್ತಿದೆ ಹಾಗೂ ಎರಡೂ ಖಂಡಗಳ ನಡುವೆ ಸೇತುವೆಯಾಗುತ್ತಿದೆ.

ಭಾರತ-ಮಧ್ಯಪ್ರಾಚ್ಯ-ಯುರೋಪ್‌ ಆರ್ಥಿಕ ಕಾರಿಡಾರ್‌(ಐಎಂಇಸಿ) ಆಧುನಿಕ ಸಾರಿಗೆ, ಮೂಲಸೌಕರ್ಯ, ಡಿಜಿಟಲ್ ನೆಟ್‌ವರ್ಕ್‌, ಇಂಧನ ವ್ಯವಸ್ಥೆ ಮತ್ತು ಪೂರೈಕೆ ಸರಪಳಿಗಳ ಮೂಲಕ ನಮ್ಮ ಪ್ರದೇಶಗಳನ್ನು ಪರಸ್ಪರ ಜೋಡಿಸುವ ದೃಷ್ಟಿಕೋನ ಹೊಂದಿದೆ. ಇದನ್ನು ನನಸು ಮಾಡಲು ಭಾರತ ಮತ್ತು ಇಟಲಿ ಇತರ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ.

ಎರಡೂ ರಾಷ್ಟ್ರಗಳ ನಡುವಿನ ಆಳವಾದ ಪಾಲುದಾರಿಕೆ ಮತ್ತು ಶಾಶ್ವತ ಸಾಂಸ್ಕೃತಿಕ ಸಂಬಂಧಗಳನ್ನು ಬಳಸಿಕೊಂಡು ನಾವು ನಮ್ಮ ಎದುರಿಗಿರುವ ಸವಾಲುಗಳನ್ನು ಎದುರಿಸಬಹುದು. ‘ಧರ್ಮ’ ಎಂಬ ಪರಿಕಲ್ಪನೆಯು ನಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡಬೇಕಾದ ಜವಾಬ್ದಾರಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಆದರೆ ‘ವಸುಧೈವ ಕುಟುಂಬಕಂ’ - ಜಗತ್ತು ಒಂದು ಕುಟುಂಬ - ಎಂಬ ತತ್ವವು ಪರಸ್ಪರ ಬೆಸೆದ ಡಿಜಿಟಲ್ ಯುಗದಲ್ಲಿ ಶಕ್ತಿಶಾಲಿಯಾಗಿ ಪ್ರತಿಧ್ವನಿಸುತ್ತದೆ. ಅಂತಹ ಮೌಲ್ಯಗಳು ಇಟಲಿಯ ಮಾನವತಾವಾದಿ ಸಂಪ್ರದಾಯದಲ್ಲಿ ನೈಸರ್ಗಿಕ ಪ್ರತಿಧ್ವನಿಯನ್ನು ಕಂಡುಕೊಳ್ಳುತ್ತವೆ, ಇದು ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಜನರು ಮತ್ತು ಸಮಾಜಗಳನ್ನು ಒಂದುಗೂಡಿಸುವ ಸಂಸ್ಕೃತಿಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ, ನಮ್ಮ ಪರಸ್ಪರ ಸಮಾನ ದೃಷ್ಟಿಕೋನವು ಜನಕೇಂದ್ರಿತವಾದ ಭದ್ರ ಮತ್ತು ಭವಿಷ್ಯದ ಭಾರತ-ಇಟಲಿ ಪಾಲುದಾರಿಕೆಗೆ ಅಡಿಪಾಯ ಹಾಕುವ ಗುರಿ ಹೊಂದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories