
ನವದೆಹಲಿ: ಪಾಕಿಸ್ತಾನದ ಬಹವಾಲ್‌ಪುರದಲ್ಲಿ ಭಾರತೀಯ ಸಿಮ್ ಕಾರ್ಡ್‌ಗಳ ದುರುಪಯೋಗ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ದೊಡ್ಡ ಮಟ್ಟದ ಬೇಹುಗಾರಿಕೆ ಜಾಲವನ್ನು ಬಯಲಿಗೆಳೆದಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಸೂಚನೆಯ ಮೇರೆಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ 43 ವರ್ಷದ ನೇಪಾಳ ಮೂಲದ ಪ್ರಭಾತ್ ಕುಮಾರ್ ಚೌರಾಸಿಯಾ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಚೌರಾಸಿಯಾ ಐಎಸ್‌ಐ ಕಾರ್ಯಕರ್ತರಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಪೂರೈಸುತ್ತಿದ್ದನೆಂಬ ಮಾಹಿತಿ ದೊರಕಿದ ನಂತರ ಅವನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಯಿತು.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನೋಂದಾಯಿಸಿದ ತನ್ನ ಆಧಾರ್ ಕಾರ್ಡ್ ಬಳಸಿ, ಅವನು ಬಿಹಾರ ಮತ್ತು ಮಹಾರಾಷ್ಟ್ರದಿಂದ 16 ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದನು. ಅವುಗಳನ್ನು ಸಕ್ರಿಯಗೊಳಿಸಿದ ಬಳಿಕ ನೇಪಾಳದ ಕಠ್ಮಂಡುವಿಗೆ ಕಳ್ಳಸಾಗಣೆ ಮಾಡಿ ನಂತರ ಐಎಸ್‌ಐ ನಿರ್ವಾಹಕರಿಗೆ ಒದಗಿಸಲಾಗುತ್ತಿತ್ತು. ಈ ಸಿಮ್‌ಗಳನ್ನು ಪಾಕಿಸ್ತಾನದ ಲಾಹೋರ್, ಬಹವಾಲ್‌ಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಬಳಸಲಾಗುತ್ತಿದ್ದು, ವಾಟ್ಸಾಪ್ ಮೂಲಕ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಉಪಯೋಗಿಸುತ್ತಿದ್ದರು ಎಂದು ಹೆಚ್ಚುವರಿ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ತನಿಖೆಯಿಂದ ತಿಳಿದುಬಂದಂತೆ, ನೇಪಾಳದ ಒಬ್ಬ ಪ್ರಮುಖ ಉದ್ಯಮಿ ಚೌರಾಸಿಯಾಗೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ. ಆತನೇ ಐಎಸ್‌ಐ ಮಾರ್ಗದರ್ಶಕನಾಗಿದ್ದು, ನೇಪಾಳದಲ್ಲಿ ಹಲವಾರು ಗೂಢಚಾರರನ್ನು ನಿರ್ವಹಿಸುತ್ತಿದ್ದನೆಂದು ಮೂಲಗಳು ತಿಳಿಸಿವೆ. ಅಲ್ಲದೆ, ನೇಪಾಳದಲ್ಲಿ ನಡೆಯುತ್ತಿರುವ Gen-Z ಪ್ರತಿಭಟನೆಗೆ ಈ ಉದ್ಯಮಿ ಪ್ರಮುಖ ಪಾತ್ರವಹಿಸಿದ್ದಾನೆಂದು ಶಂಕಿಸಲಾಗಿದೆ.
2024ರಲ್ಲಿ ಮಧ್ಯವರ್ತಿಯ ಮೂಲಕ ಐಎಸ್‌ಐ ನಿರ್ವಾಹಕರು ಚೌರಾಸಿಯಾಗೆ ಅಮೆರಿಕ ವೀಸಾ ಹಾಗೂ ವಿದೇಶದಲ್ಲಿ ಪತ್ರಿಕೋದ್ಯಮದಲ್ಲಿ ಅವಕಾಶದ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿದ್ದರು. ಪ್ರತಿಯಾಗಿ ಅವನಿಗೆ ಡಿಆರ್‌ಡಿಒ ಮತ್ತು ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಸಿಮ್ ಕಾರ್ಡ್ ಪೂರೈಕೆ ಮಾಡುವ ಕೆಲಸ ವಹಿಸಿದ್ದರು.
ಚೌರಾಸಿಯಾ ಬಂಧನದ ವೇಳೆ ಪೊಲೀಸರು ಹಲವು ಡಿಜಿಟಲ್ ಸಾಧನಗಳು, ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಿಮ್ ಕಾರ್ಡ್‌ಗಳ ಲಕೋಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ ಅವನು, ನಂತರ ಕಠ್ಮಂಡುವಿನಲ್ಲಿ ಸ್ವಂತ ಸಂಸ್ಥೆ ಪ್ರಾರಂಭಿಸಿದ್ದರೂ ಆರ್ಥಿಕ ನಷ್ಟದಿಂದಾಗಿ ಹತಾಶನಾಗಿ ಐಎಸ್‌ಐ ಕಾರ್ಯಕರ್ತರೊಂದಿಗೆ ಕೈಜೋಡಿಸಿದ್ದನೆಂದು ಹೇಳಿಕೊಂಡಿದ್ದಾನೆ.
ಎಸಿಪಿ ಕೈಲಾಶ್ ಬಿಶ್ತ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ರಾಹುಲ್ ಕುಮಾರ್ ಮತ್ತು ವಿನೀತ್ ತೇವಾಟಿಯಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಯಿತು. ಪಾಕಿಸ್ತಾನದಲ್ಲಿ ಭಾರತೀಯ ಮೊಬೈಲ್ ಸಂಖ್ಯೆಗಳ ದುರುಪಯೋಗದ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆ ತನಿಖೆ ಆರಂಭವಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ಬಿರ್ಗುಂಜ್ ಮೂಲದ ಚೌರಾಸಿಯಾ, ದೆಹಲಿಯ ಲಕ್ಷ್ಮಿ ನಗರದ ವಿಜಯ್ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಅವನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 61(2)/152 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವನ ಸಹಚರರನ್ನು ಪತ್ತೆಹಚ್ಚಲು, ಸಿಮ್ ಕಾರ್ಡ್ ಕೂರಿಯರ್ ಜಾಲವನ್ನು ಬಯಲಿಗೆಳೆಯಲು ಹಾಗೂ ವಿದೇಶಿ ನಿರ್ವಾಹಕರನ್ನು ಬಂಧಿಸಲು ತನಿಖೆ ಮುಂದುವರಿಯುತ್ತಿದೆ. ವಶಪಡಿಸಿಕೊಂಡ ಡಿಜಿಟಲ್ ಸಾಧನಗಳ ವಿಶ್ಲೇಷಣೆಯೂ ಪ್ರಗತಿಯಲ್ಲಿದೆ.
1982ರಲ್ಲಿ ಜನಿಸಿದ ಚೌರಾಸಿಯಾ ನೇಪಾಳದಲ್ಲಿ ಮ್ಯಾಟ್ರಿಕ್ಯುಲೇಷನ್ ಮುಗಿಸಿ, ಬಿಹಾರದ ಮೋತಿಹಾರಿಯಲ್ಲಿ ಮಧ್ಯಂತರ ಅಧ್ಯಯನ ನಡೆಸಿದ. ನಂತರ ವಿಜ್ಞಾನದಲ್ಲಿ ಪದವಿ ಪಡೆದಿದ್ದ ಅವನು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾನೆ. ಉದ್ಯೋಗಕ್ಕಾಗಿ ಮುಂಬೈಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದ್ದಾನೆ.