ಮಹಾಕುಂಭಮೇಳವು ಆಧ್ಯಾತ್ಮಿಕ ಪರಂಪರೆಗಳ ಮತ್ತು ಸಂಸ್ಕೃತಿಯ ಭವ್ಯ ಸಂಗಮವಾಗಿದ್ದು, ಈ ವರ್ಷ ಅದಕ್ಕೆ ಮತ್ತೊಂದು ವಿಶೇಷವನ್ನು ಸೇರ್ಪಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ, 'ಮಹಾಕುಂಭದಿಂದ ಗುರುದೇವರೊಡನೆ ಧ್ಯಾನ ಮಾಡಿ'ಕಾರ್ಯಕ್ರಮದಲ್ಲಿ ಅನೇಕ ಸಾವಿರ ಸಾಧಕರು ಭಾಗವಹಿಸಿದರು. ಮಂಗಳವಾರ ಸಂಜೆಯಂದು ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸತ್ಸಂಗವನ್ನು ನಡೆಸಿಕೊಟ್ಟರು. ಈ ಸತ್ಸಂಗದಲ್ಲಿ ಅನೇಕ ಸಾವಿರ ತೀರ್ಥಯಾತ್ರಿಗಳೊಡನೆ ಸಂತರೂ ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದರು.
ವಸಂತ ಪಂಚಮಿಯ ದಿನದಂದು ಅನೇಕ ಸಾವಿರ ಜನರಿಗೆ ಆಹಾರವನ್ನು ವಿತರಿಸಲಾಯಿತು. ಮಾಧ್ಯಮದವರೊಡನೆ ಮಾತನಾಡುತ್ತಾ ಗುರುದೇವರು, "ಈ ಕುಂಭಮೇಳವು ಒಂದು ಅದ್ಭುತವಾದ ಅನುಭವ. ಪ್ರತಿಯೊಬ್ಬರ ಆಧ್ಯಾತ್ಮಿಕ ಚೇತನವನ್ನು ಜಾಗೃತಗೊಳಿಸುವ ಅದ್ಭುತ ಅವಕಾಶವಿದು. ವಿಭಿನ್ನ ಸಂಪ್ರದಾಯ ಹಾಗೂ ನಂಬಿಕೆಗಳನ್ನು ಅನುಸರಿಸುತ್ತಿದ್ದರೂ ಸಹ, ಎಲ್ಲರೂ ಒಂದಾಗಿ ಸೇರಿ ಪೂಜಾಪಾಠಗಳನ್ನು ನಡೆಸಬಹುದು ಎಂದು ಇದು ತೋರಿಸುತ್ತದೆ. ಇಂದು ಜಗತ್ತಿನಲ್ಲಿ ಧರ್ಮ ಮತ್ತು ನಂಬಿಕೆಗಳ ನಡುವೆ ಸಂಘರ್ಷ ನಡೆಯುತ್ತಲಿರುವಾಗ, ಅವರೆಲ್ಲರೂ ಇಲ್ಲಿಗೆ ಬಂದು, ವಿವಿಧತೆಯಲ್ಲಿ ಏಕತೆಯ ಸಜೀವ ಉದಾಹರಣೆಯನ್ನು ಇಲ್ಲಿ ಕಾಣಬೇಕು" ಎಂದರು.