ದುಲಾರ್‌ಚಂದ್ ಯಾದವ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನವು ಬಿಹಾರ ಚುನಾವಣಾ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ದುಲಾರ್‌ಚಂದ್ ಯಾದವ್ ಹತ್ಯೆ ಪ್ರಕರಣದಲ್ಲಿ ಜೆಡಿಯು ಮೊಕಾಮಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅನಂತ್ ಸಿಂಗ್ ಬಂಧನ ಬಿಹಾರ ಚುನಾವಣಾ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ 30 ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 75 ವರ್ಷದ ದುಲಾರ್‌ಚಂದ್ ಯಾದವ್ ಎಂಬವರು ಮೃತರಾಗಿದ್ದರು. ಈ ಪ್ರಕರಣದಲ್ಲಿ ಅನಂತ್ ಸಿಂಗ್ ಅವರ ಬಂಧನವಾಗಿದೆ.
26
ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ. ಶರ್ಮಾ ಮಾಹಿತಿ
ಘರ್ಷಣೆ ಸಂಬಂಧ ಎರಡು ಗುಂಪಿನವರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾಕ್ಷ್ಯ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಮೃತರ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಅನಂತ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಘರ್ಷಣೆ ನಡೆದ ಸಂದರ್ಭದಲ್ಲಿ ಅನಂತ್ ಸಿಂಗ್ ಸ್ಥಳದಲ್ಲಿದ್ದರು. ಅನಂತ್ ಸಿಂಗ್ ಜೊತೆ ಅವರ ಆಪ್ತರಾದ ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ. ಶರ್ಮಾ ಮಾಹಿತಿ ನೀಡಿದ್ದಾರೆ.
36
ಅನಂತ್ ಸಿಂಗ್ ಗೆಲ್ಲುತ್ತಾರೆ
ಮೊಕಾಮಾ ವಿಧಾನಸಭಾ ಕ್ಷೇತ್ರದಲ್ಲಿ ಜನರೇ ಸ್ಪರ್ಧಿಸುತ್ತಿದ್ದು, ಅನಂತ್ ಸಿಂಗ್ ಗೆಲ್ಲುತ್ತಾರೆ. ಸತ್ಯಕ್ಕೆ ಗೆಲುವು ಸಿಗಲಿದ್ದು, ನಾವೆಲ್ಲರೂ ಕಾನೂನು ಗೌರವಿಸುತ್ತೇವೆ. ಈ ಚುನಾವಣೆಯನ್ನು ಅನಂತ್ ಸಿಂಗ್ ಮಾತ್ರ ಎದುರಿಸುತ್ತಿಲ್ಲ, ಬದಲಾಗಿ ಮೊಕಾಮಾದ ಜನರು ಎದುರಿಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬರಲಿದೆ. ನಾವು ನಮ್ಮ ನಾಯಕರ ಪರವಾಗಿ ಚುನಾವಣಾ ಪ್ರಚಾರ ಮುಂದುವರಿಸುತ್ತೇವೆ ಎಂದು ಅನಂತ್ ಸಿಂಗ್ ಆಪ್ತರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಘಟನೆಯ ಸ್ವರೂಪ ಗಮನಿಸಿಯೇ ಪೊಲೀಸರು ಅನಂತ್ ಸಿಂಗ್ ಅವರರನ್ನು ಬಂಧಿಸಿರುತ್ತಾರೆ. ಬಿಹಾರದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ. ಅರಾ, ಸಸರಾಮ್ ವಿಧಾನಸಭಾ ಕ್ಷೇತ್ರಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿಗಳಿಗೆ ಈ ಘಟನೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು. ಈ ಬಾರಿ ಗೆಲುವು ನಮ್ಮದೇ ಆಗಿದ್ದು, ನವೆಂಬರ್ 18ರಂದು ಸರ್ಕಾರ ರಚಿಸುತ್ತೇವೆ ಎಂದು ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.
56
ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ
ಚುನಾವಣೆಯ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ದುಃಖಕರ ಮತ್ತು ದುರದೃಷ್ಟಕರ. ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದೆ, ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ನಿತೀಶ್ ಕುಮಾರ್ ಸರ್ಕಾರದಲ್ಲಿ ಯಾವುದೇ ಪಕ್ಷಪಾತವಿಲ್ಲ. ಎಲ್ಲರಿಗೂ ನ್ಯಾಯು ಸಿಗಲಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಅಥವಾ ಸಿಲುಕಿಸುವುದಿಲ್ಲ. ಎನ್‌ಡಿಎ ಸರ್ಕಾರದ ಅಡಿಯಲ್ಲಿ ತಪ್ಪು ಮಾಡಿದವರಿಗೆ ಯಾರಿಗೂ ರಕ್ಷಣೆ ಸಿಗುವುದಿಲ್ಲ. ಪ್ರತಿಯೊಬ್ಬ ಅಪರಾಧಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಪ್ರತಿಕ್ರಿಯಿಸಿದ್ದಾರೆ.