ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಐತಿಹಾಸಿಕ ಮಳೆಯು ರಸ್ತೆಗಳು ಮತ್ತು ಸೇತುವೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ.
ಕಥುವಾ ಜಿಲ್ಲೆಯಲ್ಲಿರುವ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹರ್ ಖಾದ್ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದರಿಂದ ಅದರ ಮೇಲಿದ್ದ ಪ್ರಮುಖ ಸೇತುವೆ ಹಾನಿಗೊಳಗಾಗಿದೆ. ಪ್ರವಾಹದ ರಭಸ ಹೆಚ್ಚಾಗಿದ್ದರಿಂದ ಎರಡೂ ಸೇತುವೆಗಳ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಿ ವಾಹನಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ.
ಕಥುವಾ ಜಿಲ್ಲಾಧಿಕಾರಿ ರಾಜೇಶ್ ಶರ್ಮಾ ಮಾತನಾಡಿ, "ಹಳೆಯ ಸೇತುವೆಗೆ ವ್ಯಾಪಕ ಹಾನಿಯಾಗಿದೆ. ಹೊಸ ಸೇತುವೆಯ ಸ್ಥಿತಿಯ ಬಗ್ಗೆಯೂ ಸಂದೇಹಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನೂ ಮುಚ್ಚಲಾಗಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಸೇತುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಜೊತೆಗೆ, ಹಾನಿಗೊಳಗಾದ ಸೇತುವೆಯ ಮೇಲೆ ಹತ್ತಿ ಅಪಾಯಕಾರಿ ಕೃತ್ಯಗಳಲ್ಲಿ ಭಾಗಿಯಾಗಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.