ಸಮವಸ್ತ್ರದಲ್ಲಿ ಬಂದ ಮಗಳು: 'ಉನ್ನತ ಅಧಿಕಾರಿ'ಗೆ ಅಪ್ಪನ ಹೆಮ್ಮೆಯ ಸೆಲ್ಯೂಟ್‌!

First Published Aug 11, 2021, 3:04 PM IST

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ವೃತ್ತಿಜೀವನ ತಮಗಿಂತ ಉತ್ತಮವಾಗಿಸಲು ಹಗಲಿರುಳು ಶ್ರಮಿಸುತ್ತಾರೆ. ತಮ್ಮ ಮಕ್ಕಳು ಅವರಿಗಿಂತ ಉನ್ನತ ಸ್ಥಾನವನ್ನು ಸಾಧಿಸಬೇಕು ಎಂಬುದು ಅವರ ಕನಸು. ಇನ್ನು ಮಕ್ಕಳು ಯಶಸ್ಸು ಗಳಿಸಿ, ತಮಗಿಂತ ಉನ್ನತ ಹುದ್ದೆ ಅಲಂಕರಿಸಿದಾಗ ತಂದೆಗಾಗುವ ಹೆಮ್ಮೆ ಅಷ್ಟಿಷ್ಟಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲೂ ಇಂತಹುದೇ ದೃಶ್ಯ ಹೃದಯಸ್ಪರ್ಶಿ ಫೋಟೋ ವೈರಲ್ ಆಗುತ್ತಿದೆ. ಇನ್ಸ್‌ಪೆಕ್ಟರ್ ತಂದೆಯೊಬ್ಬ, ಖಾಕಿ ಸಮವಸ್ತ್ರ ಧರಿಸಿದ ಅಧಿಕಾರಿ ಮಗಳನ್ನು ಕಂಡು, ಉನ್ನತ ಅಧಿಕಾರಿ ಎಂಬ ಗೌರವ, ಮಗಳೆಂಬ ಹೆಮ್ಮೆಯಿಂದ ಸೆಲ್ಯೂಟ್‌ ಮಾಡಿದ್ದಾರೆ. ಇದನ್ನು ಕಂಡ ನೋಡುಗರು ಭಾವುಕರಾಗಿದ್ದಾರೆ. ಈ ಕ್ಷಣಕ್ಕೆ ಸಾಕ್ಷಿಯಾದವರೂ ಹೆಮ್ಮೆಯಿಂದ ಚಪ್ಪಾಳೆ ತಟ್ಟಿದ್ದಾರೆ.

ಸಹಾಯಕ ಕಮಾಂಡೆಂಟ್ ದೀಕ್ಷಾಗೆ, ಇನ್ಸ್‌ಪೆಕ್ಟರ್ ತಂದೆ ಕಮಲೇಶ್ ಕುಮಾರ್ ಸೆಲ್ಯೂಟ್

ವಾಸ್ತವವಾಗಿ, ಈ ಭಾವನಾತ್ಮಕ ಕ್ಷಣ ಕಂಡು ಬಂದಿದ್ದು ಮಸ್ಸೂರಿಯಲ್ಲಿನ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ರ ಪಾಸಿಂಗ್ ಔಟ್ ಪೆರೇಡ್‌ನಲ್ಲಿ. ಯುಪಿಎಸ್‌ಸಿ ಉತ್ತೀರ್ಣರಾದ ದೀಕ್ಷಾ ಸಹಾಯಕ ಕಮಾಂಡೆಂಟ್ ಆಗಿದ್ದಾರೆ. ವಿಶೇಷವೆಂದರೆ ದೀಕ್ಷಾ ನೇಮಕಗೊಂಡ ಇಲಾಖೆಯಲ್ಲಿ ಆಕೆಯ ತಂದೆ ಕಮಲೇಶ್ ಕುಮಾರ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐಟಿಬಿಪಿಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮಸ್ಸೂರಿಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಕಾಡೆಮಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಮಸ್ಸೂರಿಯಲ್ಲಿರುವ ತರಬೇತಿ ಅಕಾಡೆಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ 53 ಮಂದಿ ಅಧಿಕಾರಿಗಳ ಪೈಕಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಮುಂಚೂಣಿ ಸೇವೆಗೆ ನಿಯೋಜಿಸಲಾಗಿದೆ.
 

ದೀಕ್ಷಾ ತನ್ನ ಯಶಸ್ಸಿನ ಎಲ್ಲಾ ಶ್ರೇಯಸ್ಸು ತನ್ನ ತಂದೆಗೆ ನೀಡಿದ್ದಾರೆ. ನನ್ನ ತಂದೆ ನನಗೆ ಪ್ರೋತ್ಸಾಹಿಸದಿದ್ದರೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ಬಹುಶಃ ಈ ಯಶಸ್ಸು ಗಳಿಸುವುದು ಕಷ್ಟವಾಗುತ್ತಿತ್ತು  ಎಂದಿದ್ದಾರೆ. ಅವರು ನನಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿದ್ದಾರೆ.  ಕಾಲಕಾಲಕ್ಕೆ ನನ್ನನ್ನು ಪ್ರೋತ್ಸಾಹಿಸಿದರು. ಸವಾಲುಗಳನ್ನು ಎದುರಿಸುವ ಛಲವುಳ್ಳ ಮಹಿಳೆಯರಿಗೆ ITBP ಉತ್ತಮ ಪಡೆಯಾಗಿದೆ ಎಂದು ದೀಕ್ಷಾ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಗಳ ಯಶಸ್ಸಿನ ಬಗ್ಗೆ ಮಾತನಾಡಿದ ತಂದೆ, ನನ್ನ ಮಗಳು ITBP ಗೆ ಸೇರಬೇಕು ಎಂಬುದು ನನ್ನ ಕನಸಾಗಿತ್ತು. ಇತರ ಹೆಣ್ಣು ಮಕ್ಕಳಿಗೆ ಆಕೆ ಮಾದರಿಯಾಗಿದ್ದಾಳೆ. ನನ್ನ ಮಗಳು ಇಂದು ಉನ್ನತ ಅಧಿಕಾರಿಯಾಗಿ ನನ್ನ ಮುಂದೆ ಬಂದ ಕ್ಷಣ ಅತ್ಯಂತ ಭಾವನಾತ್ಮಕವಾಗಿತ್ತು. ಆ ಕ್ಷಣಕ್ಕಾಗಿ ನಾನು ವರ್ಷಗಳಿಂದ ಕಾಯುತ್ತಿದ್ದೆ, ಆಕೆ ನನ್ನ ಕನಸನ್ನು ನನಸಾಗಿಸಿದ್ದಾಳೆ, ಇದಕ್ಕಿಂತ ದೊಡ್ಡ ಖುಷಿ ನನ್ನ ಪಾಲಿಗೆ ಬೇರೊಂದಿಲ್ಲ ಎಂದಿದ್ದಾರೆ. 
 

2016ರಲ್ಲಿ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯ ಮೂಲಕ ಐಟಿಬಿಪಿ ಮಹಿಳಾ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಮುನ್ನ ತಳಮಟ್ಟದ ಶ್ರೇಣಿಗಳಿಗೆ ಮಾತ್ರ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು.

click me!