ಲಖನೌ (ಏ.26): ಒಬಿಸಿ ಕೋಟಾದಲ್ಲಿ ಮುಸ್ಲಿಮರಿಗೆ ಮೀಸಲು ನೀಡುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪ್ರಯತ್ನವು ದೇಶವನ್ನು ಇಸ್ಲಾಮೀಕರಣ ಮಾಡುವ ಮತ್ತು ವಿಜಭನೆ ಮಾಡುವ ಅಜೆಂಡಾದ ಭಾಗವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯೋಗಿ, ‘ಕರ್ನಾಟಕದಲ್ಲಿ ಏನಾಗಿದೆಯೇ ಅದು ದುರದೃಷ್ಟಕರ. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು ಮತ್ತು ಹಿಂದುಳಿದ ಸಮುದಾಯದವರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆ. ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ ನೀಡುವ ಯತ್ನವು ದೇಶವನ್ನು ಇಸ್ಲಾಮೀಕರಣ ಮಾಡುವ ಅಜೆಂಡಾದ ಭಾಗವಾಗಿದೆ.
ಈ ಬಗ್ಗೆ ಮತದಾರರು ಎಚ್ಚೆತ್ತುಕೊಳ್ಳಬೇಕು’ ಎಂದು ಕರೆ ನೀಡಿದರು. ಜೊತೆಗೆ ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ನ್ಯಾ. ರಂಗನಾಥ್ ಮಿಶ್ರಾ ಆಯೋಗ, ಸಾಚಾರ್ ಆಯೋಗ ಕೂಡ ಹೀಗೆ ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ ನೀಡುವ ಶಿಫಾರಸು ಮಾಡಿದ್ದವು. ಆಗ ಕೂಡ ಬಿಜೆಪಿ ಇದರ ವಿರುದ್ಧ ದೊಡ್ಡ ಹೋರಾಟ ನಡೆಸಿತ್ತು ಎಂದು ಸಿಎಂ ಯೋಗಿ ಹೇಳಿದರು.
ಕಾಂಗ್ರೆಸ್ ಬಂದಲ್ಲಿ ಷರಿಯಾ ಕಾನೂನು ಜಾರಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಭಾರತದಾದ್ಯಂತ ಮುಸ್ಲಿಮರ ವೈಯಕ್ತಿಕ ಕಾನೂನು ಗುಚ್ಛವಾದ ಷರಿಯಾ ನೀತಿಗಳನ್ನು ಜಾರಿ ಮಾಡಲಿದೆ ಎಂದು ಆರೋಪಿಸಿದ್ದಾರೆ. ‘ಕಾಂಗ್ರೆಸ್ ಮತ್ತು ಅದರ ಅಂಗಪಕ್ಷಗಳು ರಾಷ್ಟ್ರಕ್ಕೆ ದ್ರೋಹ ಮಾಡಿದ್ದು, ಮತ್ತೊಮ್ಮೆ ಸುಳ್ಳು ಪ್ರಣಾಳಿಕೆಯೊಂದಿಗೆ ನಿಮ್ಮ (ಜನರ) ಮುಂದೆ ಬಂದಿದೆ.
ಅವರ ಪ್ರಣಾಳಿಕೆಯಲ್ಲಿ ವ್ಯಕ್ತಿಗತ ಕಾನೂನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಅಂದರೆ ಮುಸ್ಲಿಮರ ಷರಿಯಾ ಕಾನೂನು ಜಾರಿ ಮಾಡುವ ಮೂಲಕ ಪ್ರಧಾನಿ ಮೋದಿ ಕಿತ್ತೊಗೆದ ತ್ರಿವಳಿ ತಲಾಖ್ ಮತ್ತೆ ಜಾರಿ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.