ಚಲಿಸುವ ರೈಲಿನ ಶೌಚಾಲಯದ ಡ್ರೈನೇಜ್ ಪೈಪ್‌ಗೆ ಬಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ರೈಲ್ವೆ ಸಿಬ್ಬಂದಿ ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಗಲೀಜು ತುಂಬಿದ ಟ್ಯಾಂಕ್‌ನಿಂದ ಉಂಗುರವನ್ನು ಪತ್ತೆಹಚ್ಚಿದ್ದಾರೆ. ಮುಂದೇನಾಯ್ತು ಈ ಸುದ್ದಿ ಓದಿ.
ರೈಲಿನಲ್ಲಿ ಪ್ರಯಾಣಿಸುವಾಗ ನಮ್ಮ ಬೆಲೆಬಾಳುವ ವಸ್ತುಗಳು ಶೌಚಾಲಯದ ಪೈಪ್ ಅಥವಾ ಟ್ಯಾಂಕ್‌ಗೆ ಬಿದ್ದರೆ, ಅವು ಮತ್ತೆ ಸಿಗುತ್ತವೆ ಎಂಬ ಆಸೆಯನ್ನೇ ನಾವು ಬಿಟ್ಟುಬಿಡುತ್ತೇವೆ. ಆದರೆ, ಅಹಮದಾಬಾದ್ ರೈಲ್ವೆ ಸಿಬ್ಬಂದಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಮೂಲಕ ಇಡೀ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಲಿಸುವ ರೈಲಿನ ಶೌಚಾಲಯದ ಡ್ರೈನೇಜ್ ಪೈಪ್‌ಗೆ ಬಿದ್ದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ರೈಲ್ವೆ ಸಿಬ್ಬಂದಿ ಹರಸಾಹಸ ಪಟ್ಟು ಹೊರತೆಗೆದು ಪ್ರಯಾಣಿಕನ ಮುಖದಲ್ಲಿ ನಗು ಮೂಡಿಸಿದ್ದಾರೆ.
25
ಘಟನೆಯ ವಿವರ:
ಬಾಂಧ್ರಾ ಟರ್ಮಿನಸ್-ಭುಜ್ ಸ್ಪೆಷಲ್ ರೈಲಿನಲ್ಲಿ (ಗಾಡಿ ಸಂಖ್ಯೆ: 09037) ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ರೈಲಿನ ಬಿ-8 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಶೌಚಾಲಯ ಬಳಸುವಾಗ ಅವರ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರ ಆಕಸ್ಮಿಕವಾಗಿ ಜಾರಿ ಡ್ರೈನೇಜ್ ಪೈಪ್ ಮೂಲಕ ನೇರವಾಗಿ ವೇಸ್ಟ್ ಟ್ಯಾಂಕ್‌ಗೆ ಬಿದ್ದಿದೆ. ಉಂಗುರ ಕೈತಪ್ಪಿ ಹೋಗುತ್ತಿದ್ದಂತೆಯೇ ಆತಂಕಕ್ಕೊಳಗಾದ ಪ್ರಯಾಣಿಕ, ಉಂಗುರ ಮತ್ತೆ ಸಿಗುವುದು ಅಸಾಧ್ಯ ಎಂದು ಭಾವಿಸಿದ್ದರು. ಆದರೂ ಧೈರ್ಯಗುಂದದೆ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದರು.
35
ಅಪರೇಷನ್ ಅಹಮದಾಬಾದ್!
ಪ್ರಯಾಣಿಕ ನೀಡಿದ ದೂರಿನ ಮೇರೆಗೆ ರೈಲ್ವೆ ಇಲಾಖೆ ತಕ್ಷಣವೇ ಸ್ಪಂದಿಸಿತು. ರೈಲು ಅಹಮದಾಬಾದ್ ನಿಲ್ದಾಣ ತಲುಪುತ್ತಿದ್ದಂತೆಯೇ ಪಶ್ಚಿಮ ರೈಲ್ವೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದನ್ನು ಒಂದು 'ಮಿಷನ್' ಆಗಿ ತೆಗೆದುಕೊಂಡರು. ಸೀನಿಯರ್ ಸೆಕ್ಷನ್ ಎಂಜಿನಿಯರ್ (C&W) ಸಂಜಯ್ ಯಾದವ್, ಸಿಟಿಎಸ್ ಸ್ಟಾಫ್ ವೀರೇಂದ್ರ ಕುಮಾರ್ ಸಿಂಗ್ ಮತ್ತು ಅವರ ತಂಡವು ಕಾರ್ಯಾಚರಣೆಗೆ ಇಳಿಯಿತು.
ಶೌಚಾಲಯದ ಗಲೀಜು ತುಂಬಿದ ಟ್ಯಾಂಕ್, ಪೈಪ್‌ಲೈನ್ ಮತ್ತು ಅಲ್ಲಿನ ಭೀಕರ ದುರ್ವಾಸನೆಯನ್ನೂ ಲೆಕ್ಕಿಸದೆ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಿದರು. ಕೊನೆಗೆ ಎಲ್ಲರ ನಿರೀಕ್ಷೆಯನ್ನು ನಿಜವಾಗಿಸಿ, ಕೊಳಚೆ ತುಂಬಿದ ಟ್ಯಾಂಕ್‌ನೊಳಗೆ ಉಂಗುರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ತನ್ನ ಉಂಗುರ ಮತ್ತೆ ಸಿಗುವುದಿಲ್ಲ ಎಂದು ನೊಂದುಕೊಂಡಿದ್ದ ಪ್ರಯಾಣಿಕನಿಗೆ ಸಿಬ್ಬಂದಿ ಉಂಗುರವನ್ನು ಹಸ್ತಾಂತರಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಕುರಿತು ಅಹಮದಾಬಾದ್ ಡಿಆರ್‌ಎಂ (DRM) ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ. 'ಭಾರತೀಯ ರೈಲ್ವೆ ಪ್ರಯಾಣಿಕರನ್ನು ಕೇವಲ ಅವರ ನಿಲ್ದಾಣಕ್ಕೆ ತಲುಪಿಸುವುದಿಲ್ಲ, ಬದಲಾಗಿ ಅವರ ನಂಬಿಕೆ ಮತ್ತು ಭಾವನೆಗಳನ್ನೂ ಸುರಕ್ಷಿತವಾಗಿಡುತ್ತದೆ' ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಅಧಿಕಾರಿ ವೇದ ಪ್ರಕಾಶ್ ಅವರು ಇಡೀ ತಂಡದ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ್ದಾರೆ.
55
ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ಸಲಾಂ
ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ರೈಲ್ವೆ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ಜನರ ಭಾವನೆಗಳೊಂದಿಗೆ ಬೆರೆತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆದರೂ, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ರೈಲ್ವೆ ಅಧಿಕಾರಿಗಳು ಈ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ