ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನನ್ ಅವರು, ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಆರು ತಿಂಗಳೊಳಗೆ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಮ್ಮ ನಾಯಕ ಎಂ.ಕೆ. ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ಬೆಳವಣಿಗೆಯೊಂದರಲ್ಲಿ ನಟ-ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ಆಡಳಿತದ ಬಗ್ಗೆ ಡಿಎಂಕೆ ಹಿರಿಯ ನಾಯಕಿ ಹಾಗೂ ತಿರುಚೆಂಡೂರು ಶಾಸಕ ಅನಿತಾ ರಾಧಾಕೃಷ್ಣ ತೀವ್ರ ಹೇಳಿಕೆ ನೀಡಿದ್ದಾರೆ. ವಿಜಯ್ ನೇತೃತ್ವದ ಸರ್ಕಾರ ನಾಲ್ಕು ರಿಂದ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ದಕ್ಷಿಣ ತಮಿಳುನಾಡಿನಲ್ಲಿ ನಡೆದ ಡಿಎಂಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲು ಕಂಡಿದ್ದರೂ, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲೀನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಮರಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸರ್ಕಾರ ಇನ್ನೂ ನಾಲ್ಕು ತಿಂಗಳು ಮಾತ್ರ ಉಳಿಯುತ್ತದೆ ಎಂದು ಅವರು ವಿಜಯ್ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
25
ಟಿವಿಕೆ ಶಾಸಕನಿಗೆ ಓಪನ್ ಚಾಲೆಂಜ್
ಭಾಷಣದ ವೇಳೆ ರಾಧಾಕೃಷ್ಣನ್ ಅವರು ಟಿವಿಕೆ ಪಕ್ಷದ ವಿಲ್ಲಿವಕ್ಕಂ ಶಾಸಕ ಆಧವ್ ಅರ್ಜುನ ಅವರಿಗೆ ನೇರ ಸವಾಲು ಹಾಕಿದರು. ನಿಮಗೆ ಧೈರ್ಯವಿದ್ದರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ನಾನು ಕೂಡ ರಾಜೀನಾಮೆ ನೀಡುತ್ತೇನೆ. ತಿರುಚೆಂಡೂರಿನಲ್ಲಿ ಎದುರಾಗಿ ಸ್ಪರ್ಧಿಸೋಣ. ಇದು ನಮ್ಮ ಊರು. ಇಲ್ಲಿ ನಾವು ಯಾರನ್ನಾದರೂ ಸೋಲಿಸಬಹುದು ಎಂದು ಅವರು ಘೋಷಿಸಿದರು. ತಿರುಚೆಂಡೂರು ಕ್ಷೇತ್ರವು ಕಳೆದ ಸುಮಾರು 25 ವರ್ಷಗಳಿಂದ ರಾಧಾಕೃಷ್ಣನ್ ಅವರ ಬಲವಾದ ರಾಜಕೀಯ ಕೋಟೆಯಾಗಿದ್ದು, 2001ರಲ್ಲಿ ಅವರು AIADMK ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿ ಗೆದ್ದಿದ್ದರು. ನಂತರ ಅವರು DMK ಸೇರಿ ತಮ್ಮ ಪ್ರಭಾವವನ್ನು ಮುಂದುವರಿಸಿಕೊಂಡಿದ್ದಾರೆ.
35
ಸ್ಟಾಲಿನ್ ಮತ್ತೆ ಸಿಎಂ ಆಗುತ್ತಾರೆ
ರಾಧಾಕೃಷ್ಣನ್ ಅವರು ತಮ್ಮ ನಾಯಕ ಸ್ಟಾಲಿನ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡು, ನಮ್ಮ ತಲೈವರ್ ಸ್ಟಾಲಿನ್ ತಿರುಚಿಯಲ್ಲಿ ಸ್ಪರ್ಧಿಸಬೇಕು ಎಂದು ನಾವು ಬಯಸುತ್ತೇವೆ. ಕೊಳತ್ತೂರು ಕ್ಷೇತ್ರವನ್ನು ಅವರು ಸಿಂಗಾಪುರದಂತೆ ಅಭಿವೃದ್ಧಿಪಡಿಸಿದ್ದಾರೆ. ಜೊತೆಗೆ, ಕೊಳತ್ತೂರಿನಲ್ಲಿ ಟಿವಿಕೆಯನ್ನು ಬೆಂಬಲಿಸಿದ ಮತದಾರರ ವಿರುದ್ಧ ಟೀಕೆ ವ್ಯಕ್ತಪಡಿಸಿ, ನಾಲ್ಕು ಅಥವಾ ಆರು ತಿಂಗಳೊಳಗೆ ನಮ್ಮ ನಾಯಕ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಉದಯ ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದೀರ್ಘಕಾಲದ ಪ್ರಭಾವಕ್ಕೆ ದೊಡ್ಡ ಸವಾಲು ನೀಡಿದೆ.
ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿಸಿಕೆ ಮಿತ್ರಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಬಹುಮತ ಸಾಧಿಸಿ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನೂ ಸುಲಭವಾಗಿ ಗೆದ್ದಿದ್ದಾರೆ.
55
ಟಿವಿಕೆ ಸರ್ಕಾರವನ್ನು ತಿವಿಯುತ್ತಿರುವ ವಿರೋಧ ಪಕ್ಷದವರು
ಬಳಿಕದಿಂದ ಡಿಎಂಕೆ ನಾಯಕರು ಟಿವಿಕೆ ಸರ್ಕಾರದ ಆಡಳಿತ ಶೈಲಿ ಮತ್ತು ಸ್ಥಿರತೆಯನ್ನು ಪ್ರಶ್ನಿಸುತ್ತಾ ನಿರಂತರವಾಗಿ ಟೀಕೆ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಟಿವಿಕೆ ನಾಯಕರು ಸರ್ಕಾರ ಅಸ್ಥಿರವಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕುತ್ತಿದ್ದಾರೆ. ಒಟ್ಟಾರೆ, ತಮಿಳುನಾಡಿನ ರಾಜಕೀಯದಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವಿನ ಪೈಪೋಟಿ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ