ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ತು ಅಚ್ಚರಿಯ ವಸ್ತು.. ರೈತನ ಬದುಕಿಗೆ ಈಗ ಹೊಸ ಭರವಸೆ..!

Published : Jul 26, 2026, 03:39 PM IST

ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಉಳುಮೆ ಮಾಡುವಾಗ 4ನೇ ಶತಮಾನದ ಅಪರೂಪದ ಗಣೇಶನ ವಿಗ್ರಹಗಳು ಪತ್ತೆಯಾಗಿವೆ. ಕೆಂಪು ಮರಳುಗಲ್ಲಿನ ಈ ಪುಟ್ಟ ಗಣಪನ ಹಿಂದಿದೆ 1600 ವರ್ಷಗಳ ಇತಿಹಾಸ! ಪೂರ್ಣ ವಿವರ ಇಲ್ಲಿದೆ.

PREV
14
ರೈತನ ಜಮೀನಿನಲ್ಲಿ ಅಚ್ಚರಿ

ಗುಂಟೂರು (ಆಂಧ್ರಪ್ರದೇಶ): ಗುಂಟೂರು ಮತ್ತು ಮಂಗಳಗಿರಿ ನಡುವಿನ ಕಾಜ ಎಂಬ ಗ್ರಾಮದಲ್ಲಿ ಭೂಮಿ ಉಳುಮೆ ಮಾಡುವಾಗ ಅತ್ಯಂತ ಪುರಾತನವಾದ ಎರಡು ಗಣೇಶನ ವಿಗ್ರಹಗಳು ಮತ್ತು ಮಣ್ಣಿನ ಪಾತ್ರೆಗಳ ಅವಶೇಷಗಳು ಪತ್ತೆಯಾಗಿವೆ. ಇವು ಶಾತವಾಹನರು ಮತ್ತು ಆನಂದಗೋತ್ರಿಗಳ ಕಾಲಕ್ಕೆ ಸೇರಿದವು ಎಂದು ಪುರಾತತ್ವ ತಜ್ಞರು ಗುರುತಿಸಿದ್ದಾರೆ.

ನಡೆದಿದ್ದೇನು?

ಗ್ರಾಮದ ರೈತ ವೆಂಕಟರಾಮರೆಡ್ಡಿ ಅವರು ತಮ್ಮ ಜಮೀನಿನ ದಿಬ್ಬದಂತಹ ಜಾಗವನ್ನು ಉಳುಮೆ ಮಾಡುತ್ತಿದ್ದಾಗ ನೇಗಿಲಿಗೆ ಏನೋ ತಗುಲಿದಂತಾಗಿದೆ. ಕುತೂಹಲದಿಂದ ಅಲ್ಲಿ ಅಗೆದು ನೋಡಿದಾಗ ಕಲ್ಲಿನ ಪುಟ್ಟ ವಿಗ್ರಹಗಳು ಮತ್ತು ಮಣ್ಣಿನ ಹಂಚಿನ ಚೂರುಗಳು ಸಿಕ್ಕಿವೆ. ತಕ್ಷಣ ಅವರು ಇತಿಹಾಸ ಸಂಶೋಧಕರಾದ ಈಮನಿ ಶಿವನಾಗಿರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ.

24
ವಿಗ್ರಹಗಳ ವಿಶೇಷತೆ ಏನು?
  • ಪತ್ತೆಯಾದ ವಿಗ್ರಹಗಳು ಅತ್ಯಂತ ಚಿಕ್ಕದಾಗಿದ್ದು, ಕಲಾತ್ಮಕವಾಗಿವೆ
  • ಒಂದು ವಿಗ್ರಹವು 3 ಸೆಂ.ಮೀ ಎತ್ತರ ಮತ್ತು 5 ಸೆಂ.ಮೀ ಅಗಲವಿದೆ
  • ಇನ್ನೊಂದು 2 ಸೆಂ.ಮೀ ಎತ್ತರ ಮತ್ತು 4 ಸೆಂ.ಮೀ ಅಗಲವಿದೆ
  • ಕೆಂಪು ಮರಳುಗಲ್ಲಿನಿಂದ (Red Sandstone) ಈ ವಿಗ್ರಹಗಳನ್ನು ಕೆತ್ತಲಾಗಿದೆ
  • ಗಣೇಶನಿಗೆ ಎರಡೇ ಕೈಗಳಿದ್ದು, ಒಂದು ಕೈಯಲ್ಲಿ ದಂತ ಮತ್ತು ಇನ್ನೊಂದು ಕೈಯಲ್ಲಿ ಮೋದಕ ಹಿಡಿದಿದ್ದಾನೆ
34
ನೈಸರ್ಗಿಕ ರೂಪ

ಈ ವಿಗ್ರಹಗಳಲ್ಲಿ ಗಣೇಶನಿಗೆ ಯಾವುದೇ ಕಿರೀಟವಿಲ್ಲ. ನೈಸರ್ಗಿಕವಾದ ಆನೆಯ ತಲೆ, ಉದ್ದವಾದ ಸೊಂಡಿಲು ಮತ್ತು ದೊಡ್ಡ ಹೊಟ್ಟೆಯೊಂದಿಗೆ 'ಲಲಿತಾಸನ' ಭಂಗಿಯಲ್ಲಿ ಗಣೇಶ ಕುಳಿತಿದ್ದಾನೆ. ತಜ್ಞರ ಪ್ರಕಾರ, ಇವು ಕ್ರೀ.ಶ. 4ನೇ ಶತಮಾನಕ್ಕೆ ಸೇರಿದವು. ಪಲ್ನಾಡು ಜಿಲ್ಲೆಯ ಚೇಜರ್ಲಾದಲ್ಲಿರುವ ಕಪೋತೇಶ್ವರ ದೇವಾಲಯದ ಗಣೇಶ ವಿಗ್ರಹಕ್ಕೂ ಮತ್ತು ಇವುಗಳಿಗೂ ಬಹಳ ಹೋಲಿಕೆ ಇದೆ.

44
ಮಣ್ಣಿನ ಪಾತ್ರೆಗಳ ಅವಶೇಷ

ವಿಗ್ರಹಗಳ ಜೊತೆಗೆ ಕೆಂಪು, ಕಪ್ಪು ಮತ್ತು ಬೂದು ಬಣ್ಣದ ಮಣ್ಣಿನ ಪಾತ್ರೆಗಳ ಚೂರುಗಳು ಪತ್ತೆಯಾಗಿವೆ. ಇವು ಅಂದಿನ ಕಾಲದ ಜನರ ಜೀವನಶೈಲಿ ಮತ್ತು ವ್ಯಾಪಾರ ವಹಿವಾಟಿನ ಮೇಲೆ ಬೆಳಕು ಚೆಲ್ಲುತ್ತವೆ. ಇತಿಹಾಸ ಸಂಶೋಧಕ ಶಿವನಾಗಿರೆಡ್ಡಿ ಅವರು ಈ ವಿಗ್ರಹಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ರೈತರಿಗೆ ಸೂಚಿಸಿದ್ದಾರೆ. ಶಾತವಾಹನರ ಕಾಲದ ನಂತರದ ಆನಂದಗೋತ್ರಿಗಳ ಆಡಳಿತ ಅವಧಿಯಲ್ಲಿ ಈ ಭಾಗವು ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತವಾಗಿತ್ತು ಎಂಬುದಕ್ಕೆ ಈ ವಿಗ್ರಹಗಳೇ ಸಾಕ್ಷಿಯಾಗಿವೆ. ಇನ್ನು ತಮ್ಮ ಹೊಲದಲ್ಲಿಯೇ ಗಣೇಶನ ವಿಗ್ರಹ ಸಿಕ್ಕ ಹಿನ್ನೆಲೆಯಲ್ಲಿ ರೈತನ ಬದುಕಿಗೆ ಹೊಸ ಭರವಸೆ ಸಿಕ್ಕಂತಾಗಿದೆ. ವಿಘ್ನವಿನಾಶಕನ ಆರ್ಶೀವಾದ ಸಿಕ್ಕಿದೆ ಎಂದು ಮಾತನ್ನಾಡಿಕೊಳ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories