ಘಾನಾದ ಫುಟ್‌ಬಾಲ್ ಆಟಗಾರ ಜೂನಸ್ ಅಡ್ಜೆಟೆ, ತೀವ್ರ ಬಡತನದಲ್ಲಿ ಬೆಳೆದು, ಕುಟುಂಬಕ್ಕಾಗಿ ಕೂಲಿ ಕೆಲಸ ಮತ್ತು ಪೇಂಟಿಂಗ್ ಮಾಡುತ್ತಿದ್ದರು. ಫುಟ್‌ಬಾಲ್ ಮೇಲಿನ ಪ್ರೀತಿಯಿಂದ ಕಠಿಣ ಪರಿಶ್ರಮಪಟ್ಟು, ಇಂದು 100 ಕೋಟಿಗೂ ಅಧಿಕ ಮೊತ್ತಕ್ಕೆ ಟ್ರಾನ್ಸ್‌ಫರ್ ಆಗಿ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ 2026 ರಲ್ಲಿ ಬಡತನದ ಕಠಿಣ ದಿನಗಳನ್ನು ಕಂಡು, ಇಂದು ಜಗತ್ತಿನಾದ್ಯಂತ ಕೋಟ್ಯಂತರ ರೂಪಾಯಿ ಗಳಿಸಿ ಹೆಸರು ಮಾಡಿರುವ ಹಲವು ಫುಟ್‌ಬಾಲ್ ಆಟಗಾರರು ಆಡುತ್ತಿದ್ದಾರೆ. ಇಂದು ಅವರ ಬಳಿ ಹಣಕ್ಕೇನೂ ಕೊರತೆಯಿಲ್ಲ. ಅಂತಹ ಅಪರೂಪದ ಮತ್ತು ಸ್ಪೂರ್ತಿದಾಯಕ ಆಟಗಾರರಲ್ಲಿ ಘಾನಾ ದೇಶದ ಫುಟ್‌ಬಾಲ್ ತಾರೆ ಜೂನಸ್ ಅಡ್ಜೆಟೆ (Jonas Adjetey) ಕೂಡ ಒಬ್ಬರು.
26
ಇಂಗ್ಲೆಂಡ್ ತಂಡಕ್ಕೆ ನಡುಕ ಹುಟ್ಟಿಸಿದ ಆಟಗಾರ
ಜೂನಸ್ ಅಡ್ಜೆಟೆ ಘಾನಾ ಪರ 'ಸೆಂಟರ್ ಬ್ಯಾಕ್' (Center Back) ಪೊಸಿಷನ್‌ನಲ್ಲಿ ಆಡುತ್ತಾರೆ. ಇದರೊಂದಿಗೆ ಅವರು ಪ್ರಸಿದ್ಧ ಬುಂಡೆಸ್ಲಿಗಾ (Bundesliga) ಟೂರ್ನಿಯಲ್ಲಿ 'ವಿಎಫ್‌ಎಲ್ ವೋಲ್ಫ್ಸ್‌ಬರ್ಗ್' (VfL Wolfsburg) ಕ್ಲಬ್ ಪರವಾಗಿಯೂ ಕಣಕ್ಕಿಳಿಯುತ್ತಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಈ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದರು. ಇವರ ಡಿಫೆನ್ಸ್ ಆಟದ ಬಲದಿಂದಲೇ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಪಂದ್ಯವು ಗೋಲು ರಹಿತ (0-0) ಸಮಬಲದಲ್ಲಿ ಕೊನೆಗೊಳ್ಳುವಂತಾಯಿತು.
36
ರಸ್ತೆ ಅಪಘಾತದಲ್ಲಿ ತಂದೆ ಸಾವು; ಕುಟುಂಬಕ್ಕಾಗಿ ಕೂಲಿ ಕೆಲಸ
ಜೂನಸ್ ಅಡ್ಜೆಟೆ ಘಾನಾದ ಅಕ್ರಾ ನಗರದಲ್ಲಿ ಜನಿಸಿದ್ದರು. ಅವರ ಬಾಲ್ಯದ ದಿನಗಳು ತೀವ್ರ ಬಡತನದಿಂದ ಕೂಡಿದ್ದವು. ದುರದೃಷ್ಟವಶಾತ್ ಅವರ ತಂದೆ ರಸ್ತೆ ಅಪಘಾತವೊಂದರಲ್ಲಿ ನಿಧನರಾದರು. ತಂದೆಯ ಸಾವಿನ ನಂತರ ಇಡೀ ಕುಟುಂಬದ ಜವಾಬ್ದಾರಿ ಇವರ ಹೆಗಲ ಮೇಲೆ ಬಿತ್ತು. ಕುಟುಂಬದ ಹೊಟ್ಟೆ ತುಂಬಿಸಲು ಜೂನಸ್ ಕೂಲಿ ಕೆಲಸವನ್ನೂ ಮಾಡಬೇಕಾಗಿ ಬಂತು. ಕೆಲ ವರ್ಷಗಳ ಹಿಂದೆ ಅವರು ಮನೆಗಳಿಗೆ ಪೇಂಟಿಂಗ್ (ಬಣ್ಣ ಬಳಿಯುವ) ಕೆಲಸವನ್ನೂ ಮಾಡುತ್ತಿದ್ದರು.
ತಮ್ಮ ಫುಟ್‌ಬಾಲ್ ತರಬೇತಿಯ (Training) ವೆಚ್ಚವನ್ನು ಭರಿಸಲು ಜೂನಸ್ ಪ್ರತಿದಿನ ಮುಂಜಾನೆ 5 ಗಂಟೆಗೆ ಕೆಲಸ ಪ್ರಾರಂಭಿಸುತ್ತಿದ್ದರು. ಆಟಕ್ಕೆ ಬೇಕಾದ ಫುಟ್‌ಬಾಲ್ ಶೂಸ್ ಮತ್ತು ತರಬೇತಿಯ ವೆಚ್ಚವನ್ನು ಸರಿದೂಗಿಸಲು ಅವರು ಬೆಳಗ್ಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ (Construction Sites) ಕಾರ್ಮಿಕನಾಗಿ ದುಡಿಯುತ್ತಿದ್ದರು. ಆ ನಂತರ ಮನೆಗಳಿಗೆ ಬಣ್ಣ ಬಳಿಯುವ ಕಾಂಟ್ರಾಕ್ಟ್ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಫುಟ್‌ಬಾಲ್ ಮೈದಾನದಲ್ಲಿ ಬೆವರು ಹರಿಸುತ್ತಿದ್ದರು.
56
ಸ್ಥಳೀಯ ಕ್ಲಬ್‌ನಿಂದ ಸ್ವಿಸ್ ಲೀಗ್‌ವರೆಗೆ ಜೂನಸ್ ಜರ್ನಿ
ಜೂನಸ್ ಅಡ್ಜೆಟೆ ಅವರ ವೃತ್ತಿಜೀವನವು ಘಾನಾದ ಸ್ಥಳೀಯ ಕ್ಲಬ್‌ಗಳ ಮೂಲಕ ಪ್ರಾರಂಭವಾಯಿತು. ಈ ಆಟಗಾರ 2013 ರಿಂದ 2019 ರವರೆಗೆ 'ತೇಶೆ ಅಕಾಡೆಮಿ'ಗಾಗಿ ಆಡಿದರು. ನಂತರ ಅವರು 'ಅಕ್ರಾ ಗ್ರೇಟ್ ಒಲಿಂಪಿಕ್ಸ್' ಕ್ಲಬ್ ಸೇರಿದರು. 2021-22 ರಲ್ಲಿ ಘಾನಾ ಪ್ರೀಮಿಯರ್ ಲೀಗ್ ಮೂಲಕ ಅವರ ವೃತ್ತಿಪರ ಪದಾರ್ಪಣೆ (Debut) ಆಯಿತು. 2022 ರಲ್ಲಿ ಟ್ರಯಲ್ಸ್‌ಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ ಅವರು, ಅಲ್ಲಿನ ಪ್ರಸಿದ್ಧ 'ಎಫ್‌ಸಿ ಬೇಸೆಲ್' (FC Basel) ಕ್ಲಬ್ ಪರ ಆಡುವ ಅವಕಾಶ ಗಿಟ್ಟಿಸಿಕೊಂಡರು.
66
100 ಕೋಟಿಗೂ ಅಧಿಕ ಮೊತ್ತಕ್ಕೆ ಟ್ರಾನ್ಸ್‌ಫರ್; 11 ಕೋಟಿ ವಾರ್ಷಿಕ ಸಂಬಳ
2024-25ರ ಸೀಸನ್‌ನಲ್ಲಿ ಜೂನಸ್ ಅಡ್ಜೆಟೆ ಅವರ ನೇತೃತ್ವದ ಬೇಸೆಲ್ ತಂಡವು 'ಸ್ವಿಸ್ ಸೂಪರ್ ಲೀಗ್' ಮತ್ತು 'ಸ್ವಿಸ್ ಕಪ್' ಎರಡನ್ನೂ ಗೆದ್ದು ಚಾಂಪಿಯನ್ ಆಯಿತು. ಬೇಸೆಲ್ ಕ್ಲಬ್ ಪರ ಅವರು ಒಟ್ಟು 58 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಜೂನಸ್ 'VfL Wolfsburg' ಕ್ಲಬ್ ಪರ ಆಡುತ್ತಿದ್ದು, ಇತ್ತೀಚೆಗೆ ಅವರನ್ನು ಬರೋಬ್ಬರಿ 100 ಕೋಟಿ ರೂಪಾಯಿಗಿಂತಲೂ ಅಧಿಕ ಭಾರಿ ಮೊತ್ತಕ್ಕೆ ಟ್ರಾನ್ಸ್‌ಫರ್ (ಖರೀದಿ) ಮಾಡಲಾಗಿದೆ. ಸದ್ಯ ಅವರ ವಾರ್ಷಿಕ ಸಂಬಳವೇ ಬರೋಬ್ಬರಿ 11 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ! ಬಡತನದ ವಿರುದ್ಧ ಹೋರಾಡಿ ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಜೂನಸ್ ಕಥೆ ನಿಜಕ್ಕೂ ಯುವ ಪೀಳಿಗೆಗೆ ಮಾದರಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.