ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರಬಟ್ಟೆತೊಟ್ಟು ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲೆ ಹಾಕಿ. ನೈವೇದ್ಯಕ್ಕೆ ರೆಡಿ ಮಾಡಿಡಿ.
ಪೂಜೆ ಮಾಡುವ ಜಾಗದಲ್ಲಿ ಪೂರ್ವಾಭಿಮುಖವಾಗಿ ಎಂಟು ದಳದ ಕಮಲದ ರಂಗವಲ್ಲಿ ಹಾಕಿ. ಮಂಟಪದ ಎರಡೂ ಕಡೆ ದೀಪ ಹಚ್ಚಿಡಿ. ದೀಪಕ್ಕೆ ಅರಿಶಿನ ಕುಂಕುಮ, ಹೂವು ಇಡಿ. ಈಗ ಒಂದು ಬಟ್ಟಲಿಗೆ 5 ಮುಷ್ಠಿ ಅಕ್ಕಿ ಹರಡಿ ರಂಗೋಲಿಯ ಮಧ್ಯಭಾಗಕ್ಕೆ ಬರುವಂತೆ ಇಡಿ. ಇದರ ಮೇಲೆ ಸ್ವಸ್ತಿಕವನ್ನು ಬರೆದು ಕಳಶ ಇಡಬೇಕು.
ಕಳಶಕ್ಕೆ ನೀರು ತುಂಬಿಸಿ. ಅದರೊಳಗೆ ಅಕ್ಕಿ, ನಾಣ್ಯಗಳನ್ನು ಹಾಕಿ. ಇದಕ್ಕೆ ಅಡಿಕೆ ಹಾಕುವ ಕ್ರಮವೂ ಇದೆ. ನಂತರ ಈ ಕಳಶಕ್ಕೆ ಶ್ರೀಗಂಧ ಹಚ್ಚಿ, ಅಕ್ಷತೆ ಇಡಿ. ಹೂವು ಹಾಕಿ. ಅದರ ಮೇಲೆ 5 ವೀಳ್ಯದೆಲೆ ಅಥವಾ ಮಾವಿನೆಲೆ ಇಡಿ. ಈಗ ತೆಂಗಿನ ಕಾಯಿಯ ಎರಡು ಕಣ್ಣುಗಳು ಮುಂಭಾಗ ಬರುವ ಹಾಗೆ ಕಳಶದ ಮೇಲೆ ಇಡಿ. ಇದಕ್ಕೆ ಮೊದಲೇ ಅರಶಿನ ಹಚ್ಚಿ ಅಲಂಕಾರ ಮಾಡಿದ್ದರೆ ಚೆನ್ನ.
ಇದರ ಮೇಲೆ ದೇವಿಯ ಮುಖವಾಡ ಇಡಬೇಕು. ಕೆಲವರು ದೇವಿಯ ವಿಗ್ರಹ ಇಡುತ್ತಾರೆ. ಈ ಮುಖವಾಡಕ್ಕೂ ಅರಿಶಿನ ಕುಂಕುಮ ಹಚ್ಚಿ ಕಾಡಿಗೆ ತೀಡಿ ಅಲಂಕಾರ ಮಾಡುತ್ತಾರೆ. ಅರಿಶಿನ, ಕುಂಕುಮ, ಬಳೆ ಇತ್ಯಾದಿಗಳನ್ನು ದೇವಿಯ ಪಕ್ಕ ಇಡಬಹುದು. ದೇವಿಯ ಎದುರು ಮೂವತ್ತೆರಡು ನಾಣ್ಯಗಳನ್ನು ಇಡಬಹುದು. ದೇವಿಗೆ ಅಂತ ಎತ್ತಿಟ್ಟಮಾಂಗಲ್ಯ ಅಥವಾ ಅರಿಶಿನ ತುಂಡನ್ನು ದಾರದಲ್ಲಿ ಕಟ್ಟಿದೇವಿಗೆ ಹಾಕಬೇಕು.
ಒಡವೆಗಳಿದ್ದರೆ ಹಾಕಿ, ಗೆಜ್ಜೆ ವಸ್ತ್ರಗಳನ್ನು ಹಾಕಿ. ತಾವರೆ ಹೂವನ್ನು ಮುಡಿಸಿ. ಎಲ್ಲ ಬಗೆಯ ಹೂಗಳನ್ನು ಹಾಕಿ. ಕಳಶದ ಹಿಂದೆ ದೇವಿಯ ಫೋಟೋ ಇಟ್ಟರೆ ಉತ್ತಮ. ಐದು ಅಥವಾ ಒಂಭತ್ತು ಬಗೆಯ ಹಣ್ಣುಗಳನ್ನು ಇಡಿ.
ಮಡಿಲಕ್ಕಿ ತಯಾರಿ ಮಾಡಿಡಬೇಕು. ಎರಡು ವೀಳ್ಯದೆಲೆ, ಅಡಿಕೆ, ಬಳೆ, ಬ್ಲೌಸ್ ಪೀಸ್, ಕಾಯಿ, ಅಕ್ಕಿ, ಹೂವು, ಹಣ್ಣುಗಳನ್ನು ಇಡಬಹುದು. ಕೊಬ್ಬರಿ ಬೆಲ್ಲವನ್ನೂ ಇಡಬಹುದು. ನಂತರ ಪೂಜೆ ಶುರುಮಾಡಿ.