
ಭಾರತೀಯ ಸಂಸ್ಕೃತಿಯನ್ನು ಫೋಟೋ ಶೂಟ್‌ಗಳ ಮೂಲಕ ಹೊರ ದೇಶಗಳಲ್ಲಿ ಗ್ಯಾಲಕ್ಸಿ ಗ್ಲಾಮಡೆಸ್ಟಾ ತಂಡವು ಪರಿಚಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಈ ತಂಡವು ಶಿವ, ಅರ್ಧನಾರೀಶ್ವರ ಹಾಗೂ ಅಘೋರಿ ಪಾತ್ರದಲ್ಲಿ ಫೋಟೋ ಶೂಟ್ ಮಾಡಿದೆ.
ಭಾರತೀಯ ಸಂಸ್ಕೃತಿಯುಳ್ಳ ಹಲವು ಫೋಟೋ ಶೂಟ್‌ಗಳನ್ನು ಮಾಡಿರುವ ಈ ತಂಡದ ಕಾರ್ಯ ಗಮನಿಸಿದ ದಕ್ಷಿಣ ಅಮೆರಿಕದಿಂದ ಸ್ಥಳೀಯ ಸಂಸ್ಕೃತಿಯನ್ನು ತೋರ್ಪಡಿಸುವ ಫೋಟೋಗಳನ್ನು ಆಹ್ವಾನಿಸಿತ್ತು. ಅಂತೆಯೇ ಮೊದಲ ಬಾರಿಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಈ ತಂಡದ ಸದಸ್ಯರು ಧಾರವಾಡದ ಇಕೋ ವಿಲೇಜ್, ರಂಗಾಯಣದ ಆವರಣದಲ್ಲಿ ಸೆಟ್ ಸಿದ್ಧಪಡಿಸಿ ಅದ್ಭುತ ಫೋಟೋಗಳನ್ನು ಸೆರೆಹಿಡಿದಿದ್ದಾರೆ.
ಈಶ್ವರನ ಪಾತ್ರದಲ್ಲಿ ಅನ್ವರ್ ಎಂಜಿನಿಯರ್ ಹಾಗೂ ಅರ್ಧನಾರೀಶ್ವರ ಪಾತ್ರದಲ್ಲಿ ಅಮೃತಾ ಶಂಕರ ನಾಯ್‌್ಕ ಹಾಗೂ ಅಘೋರಿ ಪಾತ್ರದಲ್ಲಿ ಚೇತನ ಧಾರವಾಡ ಕಾಣಿಸಿಕೊಂಡಿದ್ದಾರೆ. ಈ ಗುಂಪಿನ ಅದ್ಭುತ ಫೋಟೋ ಶೂಟ್‌ನ್ನು ಆರ್.ಕೆ. ಛಾಯಾ ಫೌಂಡೇಶನ್ ಮಾಡಿದೆ. ತಾಂತ್ರಿಕವಾಗಿ ವಿಶ್ವನಾಥ ಸಹಕಾರ ನೀಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಂಡದ ಮುಖಂಡ ಅನ್ವರ ಎಂಜಿನಿಯರ್ ಮಾಹಿತಿ ನೀಡಿದರು.
ಜಗತ್ತಿನಾದ್ಯಂತ ಭಾರತೀಯ ಸಂಸ್ಕೃತಿಗೆ ಸಾಕಷ್ಟುಗೌರವ ಮತ್ತು ಬೇಡಿಕೆ ಇದೆ. ಆದಾಗ್ಯೂ ಫೋಟೋಶೂಟ್ ಇರಬಹುದು ಅಥವಾ ಮಾಡೆಲಿಂಗ್ ಇರಬಹುದು. ನಮ್ಮವರು ಪಾಶ್ಚಿಮಾತ್ಯ ಸಂಸ್ಕೃತಿ, ಬಟ್ಟೆಗಳ ಮೂಲಕ ಮಾಡುತ್ತಾರೆ. ನಮ್ಮ ಹಬ್ಬ-ಹರಿದಿನಗಳು ಇರಬಹುದು. ಜಾತ್ರೆ, ಆಚರಣೆಗಳೂ ಇರಬಹುದು. ಜಗತ್ತಿಗೆ ಮಾದರಿ ಸಂಸ್ಕೃತಿ ನಮ್ಮಲ್ಲಿದ್ದು, ಈ ಹಿನ್ನೆಲೆಯಲ್ಲಿ ಈ ಸಂಸ್ಕೃತಿಯನ್ನು ಫೋಟೋಗಳ ಮೂಲಕ ಸೆರೆ ಹಿಡಿದು ಹೊರ ದೇಶಗಳಿಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಬರುವ ದಿನಗಳಲ್ಲಿ ಹೋಳಿ, ಯುಗಾದಿ, ದೀಪಾವಳಿ ಸೇರಿದಂತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸಂದರ್ಭಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಮಾಡೆಲ್‌ಗಳಾಗಬೇಕು ಎನ್ನುವರು ನಮ್ಮ ಸಂಪ್ರದಾಯ ಬಿಂಬಿಸುವ ಇಂತಹ ಫೋಟೋ ಶೂಟ್‌ಗಳಲ್ಲಿ ಭಾಗವಹಿಸಬಹುದು ಎಂದ ಅನ್ವರ ತಿಳಿಸಿದರು.
ಭಾರತೀಯ ಸಂಸ್ಕೃತಿಯನ್ನು ಫೋಟೋ ಶೂಟ್‌ಗಳ ಮೂಲಕ ಹೊರ ದೇಶಗಳಲ್ಲಿ ಗ್ಯಾಲಕ್ಸಿ ಗ್ಲಾಮಡೆಸ್ಟಾ ತಂಡವು ಪರಿಚಯಿಸುತ್ತಿದೆ. ಮೊದಲ ಬಾರಿಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಈ ತಂಡವು ಶಿವ, ಅರ್ಧನಾರೀಶ್ವರ ಹಾಗೂ ಅಘೋರಿ ಪಾತ್ರದಲ್ಲಿ ಫೋಟೋ ಶೂಟ್ ಮಾಡಿದೆ. ಕಣ್ಮನ ಸೆಳೆಯುವ ಶಿವ, ಅರ್ಧನಾರೀಶ್ವರ, ಅಘೋರಿ ಭಾವಚಿತ್ರಗಳು ಇಂತಿವೆ ನೋಡಿ....
ಮಹಾ ಶಿವರಾತ್ರಿ(Maha Shivaratri) ಹೆಸರಿಗೆ ತಕ್ಕಂತೆ ಶಿವನನ್ನು ಆರಾಧಿಸುವ ಮಹಾರಾತ್ರಿಯಾಗಿಯೇ ಭಾರತದಾದ್ಯಂತ ಕಂಡುಬರುತ್ತದೆ. ಹಿಂದೂಗಳು ಹಾಗೂ ನೇಪಾಳಿಗರಿಗೆ ಇದು ಬಹು ದೊಡ್ಡ ಹಬ್ಬವಾಗಿದ್ದು, ಭಾರತ(India) ಮತ್ತು ನೇಪಾಳ(Nepal)ದಲ್ಲಿ ಸಂಭ್ರಮದ ಆಚರಣೆ ಕಾಣಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ಹಬ್ಬವಾದರೂ, ರಾತ್ರಿಯ ಜಾಗರಣೆ ಮಾಡುವುದು ಅಮಾವಾಸ್ಯೆಯಂದು. ಮಹಾಶಿವರಾತ್ರಿಯ ದಿನ ಆಚರಣೆಯ ಹಿನ್ನೆಲೆಯಲ್ಲಿ ಹಲವು ಕತೆಗಳು ಕಾಣಬರುತ್ತವಾದರೂ, ಎಲ್ಲಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಪಡೆದಿರುವುದು ಇಂದು ಶಿವ-ಪಾರ್ವತಿ ವಿವಾಹವಾದ ದಿನ ಎಂಬ ಕತೆ. ದೇವಾನುದೇವತೆಗಳಿಗೇ ದೇವರಾಗಿರುವ ಮಹಾದೇವನನ್ನು ಪೂಜಿಸಿ, ಭಜಿಸುವ ಈ ಹಬ್ಬ
ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಸಮುದ್ರದಿಂದ ವಿಷದ ಮಡಕೆ ಹೊರಹೊಮ್ಮಿತು. ದೇವತೆಗಳು(devs) ಮತ್ತು ರಾಕ್ಷಸರು(demons) ಭಯಭೀತರಾಗಿದ್ದರು, ಏಕೆಂದರೆ ಅದು ಇಡೀ ಪ್ರಪಂಚವನ್ನು ನಾಶ ಪಡಿಸುವಷ್ಟು ಪ್ರಬಲ ವಿಷವನ್ನು ಹೊಂದಿತ್ತು. ಈ ಹಾಲಾಹಲ ಜಗತ್ತನ್ನೇ ಮುಳುಗಿಸುತ್ತದೆ ಎಂಬ ಭಯದಿಂದ ದೇವತೆಗಳು ಹಾಗೂ ರಾಕ್ಷಸರೆಲ್ಲರೂ ಸಹಾಯ ಕೋರಿ ಶಿವನ ಬಳಿಗೆ ಓಡಿದರು. ಜಗತ್ತನ್ನು ರಕ್ಷಿಸುವ ಸಲುವಾಗಿ, ಶಿವನು ದೊಡ್ಡದೊಂದು ನಿರ್ಧಾರವನ್ನು ಸ್ಥಳದಲ್ಲೇ ತೆಗೆದುಕೊಂಡು ಅಷ್ಟೂ ಹಾಲಾಹಲವನ್ನು ಕುಡಿದನು. ಕೂಡಲೇ ಪಾರ್ವತಿಯು ವಿಷ ಕೆಳಗಿಳಿಯದಿರಲೆಂದು ಶಿವನ ಗಂಟಲನ್ನು ಒತ್ತಿ ಹಿಡಿದಳು. ವಿಷ ಅಲ್ಲಿಯೇ ತುಂಬಿ ನಿಂತಿತು. ಶಿವನ ಕತ್ತು ವಿಷದಿಂದಾಗಿ ನೀಲಿ(blue) ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಅವನಿಗೆ ನೀಲಕಂಠ ಎನ್ನುವ ಹೆಸರು ಬಂದಿದ್ದು. ಒಂದು ಕತೆಯ ಪ್ರಕಾರ ಹೀಗೆ ಶಿವ ಜಗತ್ತನ್ನು ವಿಷದಿಂದ ರಕ್ಷಿಸಿದ ದಿನವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಶಿವ ಮತ್ತು ಶಕ್ತಿಯ ವಿವಾಹದ ದಂತಕಥೆಯು ಮಹಾಶಿವರಾತ್ರಿಯ ಹಬ್ಬಕ್ಕೆ ಸಂಬಂಧಿಸಿದ ಪ್ರಮುಖ ದಂತಕಥೆಗಳಲ್ಲಿ ಒಂದಾಗಿದೆ. ಶಿವನು ತನ್ನ ದೈವಿಕ ಸಂಗಾತಿಯಾದ ಶಕ್ತಿಯೊಂದಿಗೆ ಎರಡನೇ ಬಾರಿಗೆ ಹೇಗೆ ಮದುವೆಯಾದನು ಎಂಬುದನ್ನು ಈ ಕಥೆಯು ನಮಗೆ ಹೇಳುತ್ತದೆ. ಜೊತೆಗೆ, ಅವರಿಬ್ಬರ ವಿವಾಹ(marriage) ವಾರ್ಷಿಕೋತ್ಸವದಂತೆ ಶಿವರಾತ್ರಿ ಆಚರಣೆ ನಡೆಯುತ್ತದೆ ಎನ್ನಲಾಗುತ್ತದೆ.
ವಿಷ್ಣು ಹಾಗೂ ಬ್ರಹ್ಮ ದೊಡ್ಡ ಜಗಳಕ್ಕಿಳಿದು ಅದನ್ನು ಶಿವ ಬಿಡಿಸಿದ ದಿನವಾಗಿಯೂ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಹೆಚ್ಚು ಎಂಬ ವಾಗ್ವಾದ ನಡೆಯಿತು. ಆಗ ಇದನ್ನು ನಿಭಾಯಿಸಲು ಶಿವ(Shiva)ನು ಅವರಿಬ್ಬರ ನಡುವೆ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಬೆಳಕಿನ ರೇಖೆಯೊಂದನ್ನು ದೊಡ್ಡ ಕಂಬದ ಹಾಗೆ ಸೃಷ್ಟಿಸಿ ಯಾರು ಅದರ ಕೊನೆ ಎಲ್ಲಿದೆ ಎಂದು ನೋಡುವರೋ ಅವರೇ ಹೆಚ್ಚು ಎನ್ನುತ್ತಾನೆ. ಆಗ ಬ್ರಹ್ಮ ಅದರ ತುದಿ ಹುಡುಕಿಕೊಂಡು ಮೇಲಕ್ಕೆ ಹೋದರೆ ವಿಷ್ಣುವು ಕೆಳಭಾಗಕ್ಕೆ ಹೋಗುತ್ತಾನೆ. ಕಡೆಗೆ ವಿಷ್ಣು ಬಂದು ತನಗೆ ಅದರ ತುದಿ ಸಿಗಲಿಲ್ಲವೆಂದು ಸೋಲೊಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮನು ಗೆಲ್ಲಬೇಕೆಂಬ ಹಟದಿಂದ ತಾನು ಆ ಜ್ಯೋತಿಯ ಕೊನೆ ನೋಡಿದ್ದಾಗಿ ಸುಳ್ಳು ಹೇಳುತ್ತಾನೆ. ಬ್ರಹ್ಮ ಸುಳ್ಳು ಹೇಳುವುದು ಗೊತ್ತಾದ ಶಿವನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಇನ್ನು ನಿನ್ನನ್ನು ಯಾರೂ ಪ್ರಾರ್ಥಿಸುವುದಿಲ್ಲ, ಪೂಜಿಸುವುದಿಲ್ಲ ಎಂದು ಶಾಪ ಕೊಡುತ್ತಾನೆ. ಅದಕ್ಕೇ ಇಂದಿಗೂ ಬ್ರಹ್ಮನನ್ನು ಯಾರೂ ಪೂಜಿಸುವುದಿಲ್ಲ. ಆ ಬೆಳಕಿನ ಕಂಬವೇ ಜ್ಯೋತಿರ್ಲಿಂಗ(Jyotirlinga). ಹೀಗೆ ಜ್ಯೋತಿರ್ಲಿಂಗ ಸೃಷ್ಟಿಯಾದ ದಿನ ಇದೆಂದು ಹೇಳಲಾಗುತ್ತದೆ.
ಧಾರವಾಡ ಮೂಲದ ಗ್ಯಾಲಕ್ಸಿ ಗ್ಲಾಮಡೆಸ್ಟಾತಂಡದ ಸದಸ್ಯರು ಶಿವರಾತ್ರಿ ಹಿನ್ನೆಲೆಯಲ್ಲಿ ಸೆರೆಹಿಡಿದ ಈಶ್ವರ, ಅರ್ಧನಾರೀಶ್ವರ ಹಾಗೂ ಅಘೋರಿ ಚಿತ್ರಗಳು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಅಮೃತಾ ಶಂಕರ ನಾಯ್ಕ, ಚೇತನ ಧಾರವಾಡ, ರಾಮಚಂದ್ರ ಕುಲಕರ್ಣಿ ಹಾಗೂ ವಿಶ್ವನಾಥ್ ಇದ್ದರು.