ವರದಿ- ಪುಟ್ಟರಾಜು.ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಅಚ್ಚ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿ ತಾಲೋಕಿನ ಗುಮಟಾಪುರದಲ್ಲಿ ಪ್ರತಿ ವರ್ಷ ಇಲ್ಲಿ ಬಲಿಪಾಡ್ಯಮಿಯ ಮಾರನೆ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬ ಆಚರಿಸಲಾಯ್ತು. ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಹಬ್ಬದ ದಿನ ಬೆಳಿಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗು ಟ್ರಾಕ್ಟರ್ ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ. ಇದಾದ ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ ಹಣೆಗೆ ನಾಮ ಬಳಿದು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕತ್ತೆಯ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ.