ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳ ಸುಪ್ರಸಿದ್ಧ. ಇಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಅಪಾರ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದು ಧನ್ಯರಾಗುತ್ತಾರೆ. ಇಲ್ಲಿ ಭೇಟಿ ನೀಡಲು ಇರುವ ಇನ್ನೊಂದು ಮುಖ್ಯವಾದ ಜಾಗದ ಬಗ್ಗೆ ನಿಮಗೆ ಗೊತ್ತಾ? ಅದೇ ಅಣ್ಣಪ್ಪ ಸ್ವಾಮಿ ಬೆಟ್ಟ. ಈ ಬೆಟ್ಟದ ವಿಶೇಷವೆಂದರೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಲಿಂಗ ನೆಲೆಸಲು ಕಾರಣವಾದ ಶ್ರೀ ಅಣ್ಣಪ್ಪ ದೇವರ ಗುಡಿ ಇರುವುದು ಇಲ್ಲೇ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಂಜುನಾಥ ಸ್ವಾಮಿಯ ಜೊತೆ ಅಣ್ಣಪ್ಪ ದೇವರ ದರ್ಶನವನ್ನೂ ಪಡೆದರೆ ಯಾತ್ರೆ ಸಂಪೂರ್ಣ ಆದಂತೆ.