ಇಲ್ಲಿ ನಡೆಯುತ್ತೆ ಲಕ್ಷ್ಮೀದೇವಿ- ರಂಗನಾಥ ಜೋಡಿಯ ಭರ್ಜರಿ ಕಲಹ, ಭಕ್ತರಿಗೆ ದೇವರಾದ್ರೂ ಹೆಂಡತಿಗೆ ಗಂಡನೇ!

First Published Apr 6, 2023, 3:35 PM IST

ಚೆಳ್ಳಕೆರೆ ತಾಲ್ಲೂಕಿನ ಬೆಳಗೆರೆಯ ಶ್ರೀ ರಂಗ ಕ್ಷೇತ್ರದಲ್ಲಿ ಚಿತ್ರಾ ಪೌರ್ಣಮಿಯಂದು ನಡೆಯುತ್ತೆ ಲಕ್ಷ್ಮೀ ರಂಗನಾಥರ ಕಲ್ಯಾಣೋತ್ಸವ. ವಿವಾಹದ ಬಳಿಕ ನಡೆಯುತ್ತೆ ಜೋಡಿಗಳ ಭರ್ಜರಿ ಕಲಹ.. ಏನು ಈ ಗಲಾಟೆ ? ಏನು ಈ ಕ್ಷೇತ್ರ ಮಹಿಮೆ?

'ನೀನು ಸುಮ್ನೆ ಮೊಂಡು ಮಾಡ್ಕ್ಯಂಡ್ವ ಕುತ್ಕಬೇಡ. ಆಗತ್ತೆ ಅಂಬಂಗಿದ್ರೆ ಬಲ್ಗಡಿಕ್ಕೆ ಕೊಡು. ಇಲ್ಲಪ್ಪಾ ಆಗಲ್ಲ ಅಂಬಂಗಿದ್ರೆ ಎಡಗಡಿಕ್ಕೇ ಕೊಡು. ನಾನೇನ್ ಬೇಜಾರ್ ಮಾಡ್ಕ್ಯಂಬಲ್ಲ. ಇದು ದೊಡ್ ಕಾರ್ಯ. ಕೈಹಾಕಿದ್ರೆ ಏಳಿಗೆ ಆಗತ್ತಾ ಇಲ್ವಾ..? ಇದುಕ್ಕೆ ಉತ್ರ ಬೇಕು. ಅದುಕ್ಕಮ್ತಲೇ ನಿಂತಕೆ ಬಂದಿರದು. ಮುಂದೇನು ಅಂಬದು ನಿಂಗೇ ಗೊತ್ತು. ಅದ್ನೆಲ್ಲಾ ನೋಡಿ ಲೆಕ್ಕ ಹಾಕಿ ಪ್ರಸಾದ ಕೊಡು.'

ಮೌನ

'ಅಗಳಪ್ಪಾ..! ಏಟೊತ್ತು ನಿಂತಾವ್ ಮಾತು..? ಕೊಡ್ತಿಯಾ ಇಲ್ವಾ..? ಏ.. ಬಿಡಪ್ಪಾ ಹಿಂಗೆ ಮುನಿಸ್ಕ್ಯಂಡಿದ್ರೆ ಎತ್ಲಾಗೋಗನ..? ಮಾತಾಡ್ತಿಯಾ ಇಲ್ಲ ಈಗ..! ಜಲ್ದಿ ಕೊಡು. ಒತ್ತು ಮುಣುಗಾಕ್ ಬಂತು. ಏಟೊತ್ತು ಅಂತ ಕುತ್ಕಮನಾ ನಿಂತಾವಾ..! ಆಗತ್ತೆ ಅಂಬಗಿದ್ರೆ ಬಲ್ಗಡಿಕ್ಕೆ ಹೂವ ಉದುರ್ಸು. ಆಗಲ್ವಾ ಬಿಡು.'

ಮೌನ

'ಕೊಡ್ತೀಯಾ ಇಲ್ಲಾ ಈಗ..? ಏಟೋತ್ತು ನಿಂತಗೆ ಮಾತು..? ನಂಗೇನ್ ಬ್ಯಾರೆ ಕೆಲ್ಸ ಇಲ್ಲೇ..? ಜಲ್ದಿ ಕೊಡತ್ಲಾಗೆ..!'

ಅಲ್ಲಿ ಭಕ್ತನೊಬ್ಬ ದೇವರ ಜೊತೆಗೆ ನಡೆಸುವ ಸಂಭಾಷಣೆ ಇದು. ಹೀಗೆ ಶುರುವಾಗತ್ತೆ ಭಕ್ತ ಹಾಗೂ ದೇವರ ನಡುವಿನ ಮಾತುಕತೆ. 
 

ಅಲ್ಲಿ ಭಕ್ತಿ ಇದೆ, ಸ್ನೇಹವಿದೆ, ಪ್ರೀತಿ ಇದೆ. ಅಲ್ಲಿ ಮಹಾ ಜಗಳವೂ ಇದೆ. ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ, ಭಕ್ತಿಗೆ ಭಕ್ತಿ ಅನ್ನೋ ಪರಮ ಭಾವುಕ  ಕ್ಷೇತ್ರವದು. ಅಲ್ಲಿ ದೇವರು ವರ ಕೊಟ್ಟಿಲ್ಲ ಅಂದ್ರೆ ಭಕ್ತ ಜಗಳಕ್ಕೇ ನಿಂತ್ಬಿಡ್ತಾನೆ. ಶತಾಯ ಗತಾಯ ದೇವ್ರು ಎಡಗಡೆಗಾದ್ರೂ ಹೂವನ್ನು ಉದುರುಸ್ಬೇಕು. ಅಂಥ ತೀವ್ರ ಸಂಕಟವನ್ನ ದೇವರಿಗೇ ತಂದಿಟ್ಬಿಡ್ತಾರೆ ಅಲ್ಲಿನ ಭಕ್ತರು. ದೇವರಿಗೆ ಉತ್ತರ ಕೊಡದೆ ಬೇರೆ ದಾರಿನೇ ಇಲ್ಲ. ಅಲ್ಲಿ ದೇವರು ಹೂವು ಕೊಡ್ತಾನೆ. ಪಲ್ಲಕ್ಕಿ ಮೇಲೆ ಕೂತರೆ ಭಕ್ತರ ಮನೆಗಳಿಗೇ ಬಂದುಬಿಡ್ತಾನೆ. ಅಷ್ಟು ಹೃದಯವಂತ ಇಲ್ಲಿನ ಸ್ವಾಮಿ. ಅವನೇ ರಂಗನಾಥ. ಬೆಳಗೆರೆಯ ಲಕ್ಷ್ಮೀ ರಂಗನಾಥ.

Latest Videos


ಸಾಮಾನ್ಯವಾಗಿ ರಂಗನಾಥ ಅಂದ ಕೂಡ್ಲೆ ಆದಿರಂಗವಾದ ಶ್ರೀರಂಗಪಟ್ಟಣದ ರಂಗನಾಥ, ಮಧ್ಯರಂಗವಾದ ಶಿವನ ಸಮುದ್ರದ ರಂಗನಾಥ ಅಂತ್ಯರಂಗವಾದ ಶ್ರೀರಂಗಂ ನ ರಂಗನಾಥ. ಇವು ಸಾಮಾನ್ಯವಾಗಿ ಜನರಿಗೆ ತಿಳಿದಿರುವ ಪ್ರಸಿದ್ಧ ರಂಗ ಕ್ಷೇತ್ರಗಳು. ಆದರೆ ಇವುಗಳ ಹೊರತಾಗಿ ಒಂದು ಅತ್ಯಂತ ಭಾವುಕ ಕ್ಷೇತ್ರವಿದೆ. ಅದೇ ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ತಾಲ್ಲೂಕಿನ ಬೆಳಗೆರೆಯ ಶ್ರೀ ರಂಗ ಕ್ಷೇತ್ರ. ಇದು ಬರೀ ರಂಗನಾಥ ಸನ್ನಿಧಾನವಷ್ಟೇ ಅಲ್ಲ. ಲಕ್ಷ್ಮೀರಂಗನಾಥ ಕ್ಷೇತ್ರ.

ನಂದಿಹಳ್ಳಿಯಿಂದ ಬೆಳಗೆರೆಗೆ ಬಂದ ಓರ್ವ ಯಾತ್ರಿಕನಿಗೆ ಬೆಳ್ಳಿ ಮೀಸೆ ಕೋರೆಹಲ್ಲಿನ ಸಹಿತ ಸ್ವಾಮಿ ರಂಗನಾಥ ಕನಸಿಗೆ ಬಂದು ಬೆಳಗೆರೆಯಲ್ಲಿ ದೇವಾಲಯ ನಿರ್ಮಾಣ ಮಾಡುವಂತೆ ಆಜ್ಞಾಪಿಸಿದ. ಆ ಕಾರಣದಿಂದ ನೆಲೆಗೊಂಡ ಸ್ವಾಮಿ ಇಂದಿಗೂ ಭಕ್ತರ ಕೋರಿಕೆಗಳನ್ನು ಈಡೇರಿಸಲು ಇಲ್ಲಿ ನೆಲೆಸಿದ್ದಾನೆ.

ಈ ಸನ್ನಿಧಾನದಲ್ಲಿ ಮಂತ್ರ-ತ್ರಂತ್ರ-ಯಂತ್ರಸಿದ್ಧಿಗಳಿಗಿಂತ ಭಾವನೆಗಳ ಸಮರ್ಪಣೆಯೇ ದೊಡ್ಡ ಪೂಜಾ ಸೇವೆ. ಭಕ್ತನೊಬ್ಬ ಸನ್ನಿಧಿಗೆ ಬಂದು ಒಂದು ಹನಿ ಕಣ್ಣೀರಿಟ್ಟರೂ ರಂಗನಾಥ ಕೈ ಕಟ್ಟಿ ಕೂರುವವನಲ್ಲ. ತನ್ನ ಕೈಯಾರೆ ಕಂಬನಿ ಒರೆಸಿ ಕಷ್ಟ ಕಳೆವ ಕರುಣಾಮಯಿ ಈ ಸ್ವಾಮಿ. ಇಂಥ ಭಾವ ಭಗವಂತನಿಗೆ ಇಲ್ಲಿ ವರ್ಷಕ್ಕೊಮ್ಮೆ ವೈಭವದ ಉತ್ಸವ ನೆರವೇರತ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಹಾಯ ಹಾಗೂ ತಾಲ್ಲೂಕಿನ ಶಾಸಕರು ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ಕಳೆದ ವರ್ಷ ಜೀರ್ಣೋದ್ಧಾರಗೊಂಡ ರಂಗನಾಥ ಸ್ವಾಮಿಗೆ ಈಗ ವರ್ಷದ ಸಂಭ್ರಮದ ಜೊತೆಗೆ ಜಾತ್ರಾ ಉತ್ಸವ ನೆರವೇರುತ್ತಿದೆ. 

ಇದೇ ಚಿತ್ರಾ ಪೌರ್ಣಮಿಯಂದು ಅಲ್ಲಿ ಲಕ್ಷ್ಮೀ-ರಂಗನಾಥರಿಗೆ ಭಕ್ತರೇ ಮದುವೆ ಮಾಡಿಸುತ್ತಾರೆ. ಆ ಮದುವೆಯಂತೂ ಕಣ್ಮನಗಳಿಗೆ ಸಿರಿಸಿರಿ ಹಬ್ಬ. ನಮ್ಮ ಮದುವೆಗಳಲ್ಲಿ ಹೇಗೆ ಮದುವಣಗಿತ್ತಿಯನ್ನು ಅಲಂಕರಿಸಿ ಹಸೆಮಣೆಗೆ ಕರೆ ತರುತ್ತೇವೋ ಹಾಗೆಯೇ ಅಲ್ಲಿನ ಲಕ್ಷ್ಮೀದೇವಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ ಮದುವೆ ಮಂಟಪಕ್ಕೆ ಕರೆ ತರುತ್ತಾರೆ. ರಂಗನಾಥನೂ ಕೂಡ ಘನ ಸುಂದರನಾಗಿ ಬೀಗುತ್ತಾನೆ. ಇಬ್ಬರ ಕಲ್ಯಾಣೋತ್ಸವ ನೋಡಲಿಕ್ಕೆ ದಿವ್ಯ ದೃಷ್ಟಿಯೇ ಬೇಕು ಬಿಡಿ. ಅಲ್ಲಿನ ಹಾಡು-ಹಸೆ- ಮೆರವಣಿಗೆಗಳಿಂದ ಬೀಗುವುದು ಭಕ್ತರಲ್ಲ. ಬದಲಿಗೆ ದೇವತೆಗಳು. ದೇವತೆಗಳಾಗಿದ್ದರೆ ಇಂಥ ಸೊಬಗಿಲ್ಲ ಅಂತ ತಾವೇ ಭಕ್ತರಾಗಿ ಉಳಿದುಬಿಡುತ್ತಾರೆ ಇಲ್ಲಿ ಲಕ್ಷ್ಮೀರಂಗನಾಥರು. ಇಂಥ ಹೊಸ ಜೋಡಿ ಮದುವೆಯಾದ ಮಾರನೇ ದಿನ ಮಾಡಿಕೊಳ್ಳುವ ಜಗಳವಿದೆಯಲ್ಲಾ ಅದಕ್ಕೆ ಸರಿಸಾಟಿಯಾದ ಮತ್ತೊಂದು ಕಲಹ ಕಲ್ಪನೆ ಜಗತ್ತಿನಲ್ಲಿಲ್ಲವೇನೋ..!

ರಂಗನಾಥ ಸ್ವಾಮಿ ಮದುವೆಯಾದ ಮಾರನೇ ದಿನ ಸಂಜೆ ಬೇಟೆಗೆ ಅಂತ ಹೋಗಿಬಿಡುತ್ತಾನೆ. ಎಷ್ಟು ಹೊತ್ತಾದರೂ ಮರಳಿ ಮನೆಗೆ ಬರುವುದಿಲ್ಲ. ಗಂಡನ ಬರುವಿಕೆಯನ್ನ ಕಾದು ಕಾದು ಸುಸ್ತಾದ ಲಕ್ಷ್ಮೀದೇವಿ ಬಾಗಿಲನ್ನು ಜಡಿದು ಮಲಗಿಬಿಡುತ್ತಾಳೆ. ಇತ್ತ ಬೇಟೆಗೆ ಹೋದ ರಂಗನಾಥ ತನ್ನ ಸೇವಕನ ಜೊತೆ ಅಪರಾತ್ರಿಯಲ್ಲಿ ಹಿಂತಿರುಗುತ್ತಾನೆ. ಮೆಲ್ಲಗೆ ಬಾಗಿಲು ಬಡಿಯುತ್ತಾನೆ. ಸಖೀ ಬಾಗಿಲು ತೆಗಿಯಮ್ಮಾ ಅಂತ ಮೆಲು ಧ್ವನಿಯಲ್ಲಿ ಕೂಗುತ್ತಾನೆ. ಆದರೆ ಅತ್ತ ಕಡೆಯಿಂದ ಊಹುಂ ಉತ್ತರವಿಲ್ಲ. ಅಲ್ಲಿಂದ ಶುರುವಾಗತ್ತೆ ನೋಡಿ ಇಬ್ಬರ  ಜಗಳ..! 

ಇಡೀ ರಾತ್ರಿ ರಂಗನಾಥನಿಗೆ ತೆಗೆದುಕೊಳ್ಳುವ ಕ್ಲಾಸ್ ಇದೆಯಲ್ಲಾ ಯಾವ ಗಂಡ ಹೆಂಡಿರ ಜಗಳಕ್ಕೂ ಕಮ್ಮಿಯಿಲ್ಲದಷ್ಟು ಆರ್ಭಟ, ಹಾರಾಟಗಳು ನಡೆದುಬಿಡುತ್ತದೆ. 10 ಅವತಾರಗಳು ಎತ್ತಿಬಂದ ಶ್ರಮವನ್ನೆಲ್ಲಾ ಒಂದು ರಾತ್ರಿಯಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿಬಿಡುತ್ತಾಳೆ ಲಕ್ಷ್ಮೀದೇವಿ. ಇದನ್ನೇ ಪಾರಿವಾಟ ಮಾತುಗಾರಿಕೆ ಅಂತ ಮಾಡುತ್ತಾರೆ. ಲಕ್ಷ್ಮೀ ಪರವಾಗಿ ಅಲ್ಲಿನ ಪುರೋಹಿತರು, ರಂಗನಾಥನ ಪರವಾಗಿ ಊರಿನ ಗೊಲ್ಲರು ಮಾತುಗಾರಿಕೆ ಮಾಡುತ್ತಾರೆ. ಅದನ್ನು ನೋಡಿ ಹೃದಯ ತುಂಬಿಕೊಳ್ಳದವ ಈ ಜನ್ಮದಲ್ಲಿ ಹುಟ್ಟಿ ವ್ಯರ್ಥ ಜೀವಿ ಎನಿಸಿಕೊಳ್ಳುತ್ತಾನೇನೋ..! ಅಷ್ಟು ಅನ್ಯಾದರ್ಶವಾಗಿರುತ್ತದೆ ಆ ಮಾತುಕತೆ. ಅಂದಹಾಗೆ ಈ ಆದರ್ಶ ದಂಪತಿಗಳ ಕಲಹ ನಡೆಯುವುದು 07th ಏಪ್ರಿಲ್ 2023 ಇದೇ ಶುಕ್ರವಾರ ಸಂಜೆ. ಕಲಹ ಕಣ್ತುಂಬಿಕೊಳ್ಳಲಿಕ್ಕೆ ಇನ್ನೂ ಸಮಯವಿದೆ. ಸಾಧ್ಯವಾದವರು ಕಣ್ತುಂಬಿಕೊಳ್ಳಿ.

click me!