ಆ ರಸ್ತೆಯಲ್ಲಿ ಹೋದ್ರೆ ನಾಪತ್ತೆ: ಗರ್ಭಿಣಿಯ ಆತ್ಮದ ಕತೆ ಹೇಳುತ್ತೆ ಈ ನಿಗೂಢ ಥ್ರಿಲ್ಲರ್ ಸಿನಿಮಾ!

Published : Sep 04, 2026, 09:00 AM IST

ನಿಗೂಢ ರಸ್ತೆ, ಗರ್ಭಿಣಿಯ ಸಾವಿನ ರಹಸ್ಯ ಹಾಗೂ ಆಕೆಯ ಆತ್ಮದ ಕುರಿತ ಸ್ಥಳೀಯ ನಂಬಿಕೆಗಳ ಸುತ್ತ ಸಾಗುವ ಮಲಯಾಳಂ ಹಾರರ್ ಥ್ರಿಲ್ಲರ್. ವಿಷ್ಣು ಶಶಿ ಶಂಕರ್ ನಿರ್ದೇಶನದ ಈ ಸಿನಿಮಾ ಇದೀಗ ZEE5 OTTಯಲ್ಲಿ ಮಲಯಾಳಂ ಜೊತೆಗೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಲಭ್ಯವಿದೆ.

PREV
16
ಈ ಸಿನಿಮಾದ ಕಥೆ ಏನು?

ಓಟಿಟಿಯಲ್ಲಿ ಸದ್ಯ ಒಂದು ಮಲಯಾಳಂ ಹಾರರ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ನಿಗೂಢ ರಸ್ತೆ, ವರ್ಷಗಳಿಂದ ಕಾಡುತ್ತಿರುವ ದೆವ್ವದ ಕತೆ, ನಾಪತ್ತೆಯಾಗುತ್ತಿರುವ ಪ್ರಯಾಣಿಕರು ಹಾಗೂ ಹಲವು ರಹಸ್ಯಗಳ ಸುತ್ತ ಹೆಣೆದಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ಸಿನಿಮಾದ ಕಥೆ ಏನು? ನಿಜಕ್ಕೂ ಆ ರಸ್ತೆಯಲ್ಲಿ ದೆವ್ವ ಇದೆಯಾ? ಸಿನಿಮಾ ಯಾವ ಓಟಿಟಿಯಲ್ಲಿ ಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ.

26
ಏನಿದು ಸಿನಿಮಾದ ಕಥೆ?

ಕೇರಳದ ತಿರುವನಂತಪುರಂ ಸುತ್ತಮುತ್ತಲಿನ ಒಂದು ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾದ ಕಥೆ ಸಾಗುತ್ತದೆ. ಅಲ್ಲಿನ ರಸ್ತೆಯೊಂದರ ನಿರ್ದಿಷ್ಟ ತಿರುವು ಹಲವು ವರ್ಷಗಳಿಂದ ನಿಗೂಢ ಸ್ಥಳವಾಗಿ ಗುರುತಿಸಿಕೊಂಡಿದೆ. ವರ್ಷಗಳ ಹಿಂದೆ ಇದೇ ತಿರುವಿನ ಬಳಿ ಗರ್ಭಿಣಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾರೆ. ಆಕೆಯ ಸಾವಿನ ಬಳಿಕ, ಆಕೆಯ ಆತ್ಮ ಇದೇ ಪ್ರದೇಶದಲ್ಲಿ ಅಲೆದಾಡುತ್ತಿದೆ ಎಂಬ ನಂಬಿಕೆ ಸ್ಥಳೀಯರಲ್ಲಿ ಮೂಡುತ್ತದೆ.

36
ತಿರುವಿನಲ್ಲಿ ದೆವ್ವ ಇದೆಯೇ?

ಆ ರಸ್ತೆಯಲ್ಲಿ ಸಂಚರಿಸುವವರಿಗೆ ಮಹಿಳೆಯೊಬ್ಬಳು ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಮಾತುಗಳೂ ಹರಿದಾಡುತ್ತವೆ. ಇದಕ್ಕೆ ಮತ್ತಷ್ಟು ಭಯಾನಕ ತಿರುವು ನೀಡಿದ್ದು, ಈ ರಸ್ತೆಯಲ್ಲಿ ಸಂಚರಿಸಿದ ಕೆಲವರು ನಾಪತ್ತೆಯಾಗಿದ್ದಾರೆ ಎಂಬ ಸ್ಥಳೀಯ ಕಥೆಗಳು. ಹಾಗಾದರೆ ನಿಜಕ್ಕೂ ಆ ತಿರುವಿನಲ್ಲಿ ದೆವ್ವ ಇದೆಯೇ? ಗರ್ಭಿಣಿ ಮಹಿಳೆಗೆ ಏನಾಗಿತ್ತು? ಆಕೆಯ ಸಾವಿನ ಹಿಂದಿನ ರಹಸ್ಯವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಿನಿಮಾ ಸಾಗುತ್ತದೆ.

46
ನಿಜ ಘಟನೆಗಳ ಆಧಾರಿತ ಸಿನಿಮಾನಾ?

ಈ ಸಿನಿಮಾದ ಕಥೆಗೆ ತಿರುವನಂತಪುರಂ ಸಮೀಪದ ಮೈಲಮುಡು ಪ್ರದೇಶದಲ್ಲಿ ನಡೆದಿವೆ ಎಂದು ಹೇಳಲಾಗುವ ಕೆಲವು ಘಟನೆಗಳು ಸ್ಫೂರ್ತಿಯಾಗಿವೆ ಎನ್ನಲಾಗಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ‘ಸುಮತಿ ವಳವು’ ಎಂಬುದು ಸಿನಿಮಾಕ್ಕಾಗಿ ಇಡಲಾದ ಕಾಲ್ಪನಿಕ ಹೆಸರಲ್ಲ ಎಂದು ಹೇಳಲಾಗುತ್ತಿದೆ. ಇದೇ ಹೆಸರಿನ ರಸ್ತೆ ತಿರುವೊಂದು ಆ ಪ್ರದೇಶದಲ್ಲಿ ಈಗಲೂ ಇದೆ ಎಂಬ ಮಾಹಿತಿಯಿದೆ. ಹೀಗಾಗಿ ಸಿನಿಮಾದ ಕಥೆಗೂ ನೈಜ ಘಟನೆಗಳಿಗೂ ಇರುವ ಸಂಬಂಧ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

56
ಕಡಿಮೆ ಬಜೆಟ್‌ನಲ್ಲಿ ಸಿನಿಮಾ, ಭರ್ಜರಿ ಕಲೆಕ್ಷನ್!

ವಿಷ್ಣು ಶಶಿ ಶಂಕರ್ ನಿರ್ದೇಶನದ ಈ ಹಾರರ್ ಸಿನಿಮಾದಲ್ಲಿ ಮಾಳವಿಕಾ ಮನೋಜ್, ಗೋಕುಲ್ ಸುರೇಶ್, ಬಾಳು ವರ್ಗೀಸ್ ಹಾಗೂ ಸೈಜು ಕುರೂಪ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಸುಮಾರು ₹5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹30 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕಡಿಮೆ ಬಜೆಟ್‌ನಲ್ಲಿ ಮೂಡಿಬಂದ ಹಾರರ್ ಸಿನಿಮಾವೊಂದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವುದು ಚಿತ್ರತಂಡಕ್ಕೆ ಮತ್ತೊಂದು ಪ್ಲಸ್ ಆಗಿದೆ.

66
ಯಾವ OTTಯಲ್ಲಿ ನೋಡಬಹುದು?

ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಭಯಪಡಿಸಿದ್ದ ಈ ಸಿನಿಮಾ ಇದೀಗ ZEE5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿಯೂ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಇನ್ನು ಹಾರರ್ ಜೊತೆಗೆ ಮಿಸ್ಟರಿ, ನೈಜ ಘಟನೆಗಳ ಹಿನ್ನೆಲೆ ಹಾಗೂ ನಿಗೂಢತೆಯ ಅಂಶಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಒಳ್ಳೆಯ ಆಯ್ಕೆಯಾಗಬಹುದು. ಅದರಲ್ಲೂ ‘ಆ ರಸ್ತೆಯಲ್ಲಿ ನಿಜಕ್ಕೂ ದೆವ್ವ ಇದೆಯೇ?’ ಎಂಬ ಪ್ರಶ್ನೆಗೆ ಸಿನಿಮಾ ನೀಡುವ ಉತ್ತರ ತಿಳಿದುಕೊಳ್ಳಲು ಬಯಸುವವರು ಈ ಹಾರರ್ ಥ್ರಿಲ್ಲರ್ ಅನ್ನು ಒಮ್ಮೆ ಟ್ರೈ ಮಾಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories