
ದೇವದುರ್ಗ ತಾಲೂಕಿನ ಸರ್ಕಾರಿ ಗುಂಡೇರದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ್ ಕೆ. ಅವರು 2026-27ನೇ ಸಾಲಿನ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೇವದುರ್ಗ ತಾಲೂಕಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಂತಾಗಿದೆ.
ಸುಮಾರು 18 ವರ್ಷಗಳ ಹಿಂದೆ ಕರಿಗುಡ್ಡ ಕ್ಲಸ್ಟರ್ ವ್ಯಾಪ್ತಿಯ ಗುಂಡೇರದೊಡ್ಡಿ ಗ್ರಾಮಕ್ಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾದಾಗ ಶಾಲೆಗೆ ಸ್ವಂತ ಕಟ್ಟಡವೇ ಇರಲಿಲ್ಲ. ಮಕ್ಕಳಿಗೆ ಮರದ ಕೆಳಗೆ ಪಾಠ ಮಾಡುವ ಪರಿಸ್ಥಿತಿ ಇತ್ತು ಮಳೆ ಮತ್ತು ಬಿಸಿಲು ತಡೆಯಲು ರಾಮಯ್ಯ ಎನ್ನುವವರೆ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು.. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋದಾಗ ಅವರ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು. ಗ್ರಾಮಕ್ಕೆ ಸಾರಿಗೆ ಬಸ್ ಕೂಡ ಬರುತ್ತಿರಲಿಲ್ಲ. ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮೂಲಸೌಕರ್ಯಗಳ ಕೊರತೆಯೂ ಇತ್ತು. ಆದರೆ ಇಂತಹ ಪರಿಸ್ಥಿತಿಯೇ ಶಿಕ್ಷಕ ಸುರೇಶ್ ಕೆ. ಅವರ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿತು.
18 ವರ್ಷಗಳ ನಿರಂತರ ಶ್ರಮ
ಕಳೆದ 18 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಅವರು ಶಾಲೆಯ ಅಭಿವೃದ್ಧಿಯನ್ನು ತಮ್ಮ ಜವಾಬ್ದಾರಿಯೆಂದುಕೊಂಡು ಕೆಲಸ ಮಾಡಿದರು. ಹಂತ ಹಂತವಾಗಿ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನ ನಡೆಸಿದರು.
ಗ್ರಾಮಸ್ಥರು, ದಾನಿಗಳು ಹಾಗೂ ಶಾಲೆಯ ಹಿತೈಷಿಗಳ ಸಹಕಾರ ಪಡೆದು ಶಾಲೆಯ ರೂಪವನ್ನೇ ಬದಲಿಸಿದರು. ಇಂದು ಇದೇ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.
ಮಕ್ಕಳು ಪಾಠ ಕಲಿಯುವುದರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆಯ ವಾತಾವರಣವನ್ನೇ ಕಲಿಕೆಯ ಭಾಗವನ್ನಾಗಿ ಮಾಡಿದ್ದಾರೆ.
ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ ಸೆಪ್ಟೆಂಬರ್ 5ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ ಶಿಕ್ಷಕರನ್ನು ಸನ್ಮಾನಿಸಿದರು.
ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಶಿಕ್ಷಕ ಸುರೇಶ್ ಕೆ. ಅವರು, ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಹಲವು ಬದಲಾವಣೆಗಳನ್ನು ತರಲು ಸಾಧ್ಯವಾಗಿದೆ ಎಂದು ಹೇಳಿದರು.
ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಮರದ ಕೆಳಗೆ ಪಾಠ ನಡೆಯುತ್ತಿದ್ದ ಶಾಲೆ ಇಂದು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವ ಮಟ್ಟಕ್ಕೆ ಬೆಳೆದಿದೆ. ಇದರ ಹಿಂದೆ ಸರ್ಕಾರದ ಯೋಜನೆಗಳಷ್ಟೇ ಅಲ್ಲ, ಒಬ್ಬ ಶಿಕ್ಷಕನ 18 ವರ್ಷಗಳ ನಿರಂತರ ಪರಿಶ್ರಮ, ಗ್ರಾಮಸ್ಥರ ಸಹಕಾರ ಮತ್ತು ಮಕ್ಕಳ ಮೇಲಿನ ಕಾಳಜಿಯೂ ಇದೆ.
ಪ್ರಸ್ತುತ 1ರಿಂದ 5ನೇ ತರಗತಿವರೆಗೆ 43 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕೋಪಾಧ್ಯಾಯ ಶಾಲೆಯಾಗಿದ್ದರೂ ಮಕ್ಕಳ ಕಲಿಕೆಗೆ ಯಾವುದೇ ಕೊರತೆಯಾಗದಂತೆ ಸುರೇಶ್ ಅವರು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಉದ್ಯಾನವನ, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಗೋಡೆಗಳ ಮೇಲೂ ಮಹನೀಯರ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲಾಗಿದೆ.
ಶಾಲೆ ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿತ್ತು. ಶಾಲೆ ಕಟ್ಟಡವಿರುಲು ಕುಳಿತು ಪಾಠಮಾಡುವಂತಹ ಸ್ವಚ್ಛ ವಾತಾವರಣವೇ ಇರಲಿಲ್ಲ. ಇಂತ ಶಾಲೆಯೊಂದು ಇಂದು ಹೇಗೆ ಬದಲಾಗಿದೆಯೆಂದರೆ ಶಾಲೆಯ ಆವರಣವನ್ನು ಸಂಪೂರ್ಣ ಹಸಿರೀಕರಣಗೊಳಿಸಲಾಗಿದೆ. ಇದರ ಹಿಂದೆ ಶಿಕ್ಷಕ ಸುರೇಶ್ ವಿಶೇಷ ಕಾಳಜಿಯಿದೆ, ಶ್ರಮವಿದೆ ವಿವಿಧ ಗಿಡಮರಗಳನ್ನು ಬೆಳೆಸಿ ಶಾಲೆಯನ್ನು ಪರಿಸರ ಸ್ನೇಹಿ ವಾತಾವರಣವನ್ನಾಗಿ ರೂಪಿಸಿದ್ದಾರೆ.
ಪ್ರಸ್ತು ಶಾಲಾ ಆವರಣದಲ್ಲಿ ಉತ್ತಮ ಕಲಿಕಾ ಉದ್ಯಾನವನ ನಿರ್ಮಿಸಿದ್ದು, ಆವರಣದಲ್ಲಿ 90ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದ್ದು ಪ್ರತಿಯೊಂದು ಮರಕ್ಕೂ ಕಲಿಕೆಗೆ ಸಂಬಂಧಿಸಿದ ಪೋಸ್ಟರ್ಗಳನ್ನು ಹಾಕಲಾಗಿದೆ. ಇದರಿಂದ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಯಲು ಅನುಕೂಲವಾಗಿದೆ.
ಇನ್ನೊಂದು ವಿಶೇಷವೆಂದರೆ ಶಾಲಾವರಣದಲ್ಲೇ ತರಕಾರಿ ತೋಟ ಮಾಡಲಾಗಿದ್ದು ಇಲ್ಲಿಯೇ ಬೆಳೆದ ತರಕಾರಿಯನ್ನು ಬಿಸಿಯೂಟ ಬಳಸಲಾಗುತ್ತದೆ! ಸರಿಯಾದ ಮೊಬೈಲ್ ನೆಟ್ವರ್ಕ್ ಸಿಗದ ಗ್ರಾಮದಲ್ಲಿ ಇಂದು ಈ ಶಾಲೆಯಲ್ಲಿ ಓದಿದ ಮಕ್ಕಳು ಪ್ರಸ್ತುತ ಎಂಬಿಬಿಎಸ್, ಬಿ.ಎಡ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಅದಕ್ಕಾಗಿಯೇ ಸುರೇಶ್ ಕೆ. ಅವರಿಗೆ ದೊರೆತಿರುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೇವಲ ಒಬ್ಬ ಶಿಕ್ಷಕರಿಗೆ ಸಿಕ್ಕ ಗೌರವವಲ್ಲ. ಶಿಕ್ಷಕರು ಮನಸು ಮಾಡಿದರೆ ಗುಡ್ಡಗಾಡಿನ ಯಾವುದೇ ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆಯೊಂದನ್ನು ಮಾದರಿ ಶಾಲೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಸಿಕ್ಕಿರುವ ರಾಜ್ಯಮಟ್ಟದ ಮಾನ್ಯತೆಯಾಗಿದೆ.