ಆರ್ಥಿಕ, ಕೌಟುಂಬಿಕ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿನಿ. ಈ ವಿಚಾರ ತಿಳಿದು ಖುದ್ದು ನ್ಯಾಯಾಧೀಶರೇ ವಿದ್ಯಾರ್ಥಿನಿ ಮನೆಗೆ ತೆರಳಿ ಕುಟುಂಬಸ್ಥರನ್ನ ಭೇಟಿ ಮಾಡಿ ಶಿಕ್ಷಣ ಮಹತ್ವ ತಿಳಿಸಿ ವಿದ್ಯಾರ್ಥಿನಿಯನ್ನ ಮರಳಿ ಶಾಲೆಗೆ ಕರೆತಂದ ನ್ಯಾಯಾಧೀಶರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹೊಸನಗರ: ಶಾಲೆಯಿಂದ ಹೊರಗುಳಿದ ಮಗುವಿನ ಮನೆಗೆ ಬಂದ ನ್ಯಾಯಾಧೀಶ!
ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸವಲ್ಲ, ಅದು ಅಂಧಕಾರವನ್ನು ಹೋಗಲಾಡಿಸಿ ಬದುಕನ್ನು ಬೆಳಗುವ ದಿವ್ಯ ಜ್ಯೋತಿ. ಈ ಜ್ಯೋತಿಯಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಮಹದಾಸೆ ಯೊಂದಿಗೆ, ನ್ಯಾಯದಾನ ಮಾಡುವ ಕೈಗಳೇ ಇದೀಗ ಓರ್ವ ವಿದ್ಯಾರ್ಥಿನಿಯ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸಿದ ಅಪರೂಪದ ಹಾಗೂ ಅತ್ಯಂತ ಪ್ರೇರಣಾದಾಯಕ ಘಟನೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಾಕ್ಷಿಯಾಗಿದೆ.
24
ಮಗುವನ್ನ ಶಾಲೆಗೆ ಮರಳಿ ಕರೆತರಲು ಮುಂದಾದ ನ್ಯಾಯಾಧೀಶ
ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಹೊರಗುಳಿದಿದ್ದಳು. ಹಲವು ಅಧಿಕಾರಿಗಳು ಮಗುವನ್ನು ಮರಳಿ ಶಾಲೆಗೆ ಕರೆತರಲು ಅನೇಕ ಬಾರಿ ಪ್ರಯತ್ನಿಸಿದರೂ ಸಫಲರಾಗಿರಲಿಲ್ಲ. ಮಗುವಿನ ಉಜ್ವಲ ಭವಿಷ್ಯ ಕಮರಿಹೋಗುವ ಆತಂಕ ಎದುರಾಗಿತ್ತು. ಆದರೆ, ಮಸಗಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರ ಜೆ.ಎಂ.ಎಫ್.ಸಿ(JMFC) ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಮಾರುತಿ ಶಿಂಧೆ ಅವರ ಗಮನಕ್ಕೆ ಹೊಸನಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಕೆ. ಜಿ ಈ ವಿಚಾರವನ್ನು ತಂದರು.
34
ನ್ಯಾಯಾಧೀಶರ ಪ್ರಯತ್ನದಿಂದ ಮಗು ಮರಳಿ ಶಾಲೆಗೆ
ವಿಷಯ ತಿಳಿದ ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು, ಕೇವಲ ಆದೇಶ ನೀಡಿ ಸುಮ್ಮನಾಗಲಿಲ್ಲ ಬದಲಾಗಿ ಸಮಾಜದ ಮೇಲಿನ ನೈಜ ಕಳಕಳಿಯಿಂದ ಖುದ್ದು ವಿದ್ಯಾರ್ಥಿನಿಯ ಮನೆಗೆ ತೆರಳಿದ ನ್ಯಾಯಾಧೀಶರು, ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬದವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ವವನ್ನು ಅವರಿಗೆ ಮನದಟ್ಟು ಮಾಡಿ, ಅವರ ಮನವೊಲಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು. ಸತತ ಪ್ರಯತ್ನಗಳಿಂದಲೂ ಬಗೆಹರಿಯದಿದ್ದ ಸಮಸ್ಯೆಯೊಂದು, ನ್ಯಾಯಾಧೀಶರ ಒಂದು ಮಾನವೀಯ ಹೆಜ್ಜೆಯಿಂದ ಸುಖಾಂತ್ಯ ಕಂಡಿದೆ.
ಇಂದು ಆ ವಿದ್ಯಾರ್ಥಿನಿ ಮತ್ತೆ ಶಾಲೆಯ ಮೆಟ್ಟಿಲೇರಲು ಅವರ ಈ ನಡೆ ಪ್ರಮುಖ ಕಾರಣವಾಗಿದೆ.ಈ ಸಂಧರ್ಭದಲ್ಲಿ ನ್ಯಾಯಾಧೀಶರೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕೆ. ಜಿ, ಸರ್ಕಾರಿ ಅಭಿಯೋಜಕ ಅರುಣ್ ಕುಮಾರ್ ಎಸ್. ಎಂ, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪರಶುರಾಮ , ಪಿಡಿಒ ಪರಮೇಶ್ವರ ಬಿ. ಬಿ. ಹಾಗೂ ಇತರರು ಜೊತೆಯಾಗಿದ್ದರು.