ಶಾಲಾ ಮಕ್ಕಳಿಗೆ ಫ್ರೀ ನೋಟ್‌ಬುಕ್‌ ಪ್ರಸ್ತಾವ ಜೀವಂತ, 50 ಲಕ್ಷ ಮಕ್ಕಳಿಗೆ ನೋಟ್‌ಬುಕ್‌ ನೀಡಲು ಬೇಕು 75 ಕೋಟಿ ರು.

Published : Feb 24, 2026, 06:13 PM IST

ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್‌ ನೀಡುವ ಯೋಜನೆಗೆ ಹಣಕಾಸು ಇಲಾಖೆ ಇನ್ನೂ ಸಮ್ಮತಿಸಿಲ್ಲ. ಆದರೂ, ಶಿಕ್ಷಣ ಇಲಾಖೆಯು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಗಾಗಿ  CM ಮನವೊಲಿಸಲು ಪ್ರಯತ್ನಿಸುತ್ತಿದ್ದು, ಇಲಾಖೆಯಲ್ಲಿನ ಹಣ ಸೋರಿಕೆ ತಡೆದು ಅನುದಾನ ಒದಗಿಸುವ ಪ್ರಸ್ತಾವನೆ ಇಟ್ಟಿದೆ.

PREV
15
ವರದಿ: ಲಿಂಗರಾಜು ಕೋರಾ

ಬೆಂಗಳೂರು: ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ನೋಟ್‌ ಬುಕ್‌ ನೀಡುವ ಯೋಜನೆಗೆ ಹಣಕಾಸು ಇಲಾಖೆ ಸಮ್ಮತಿಸಿಲ್ಲವಾದರೂ ಶಿಕ್ಷಣ ಇಲಾಖೆ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಈ ಯೋಜನೆ ಜಾರಿಗಾಗಿ ಮುಖ್ಯಮಂತ್ರಿಯವರ ಮನವೊಲಿಕೆ ಪ್ರಯತ್ನ ಬಿಟ್ಟಿಲ್ಲ.

25
ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ

ಇತ್ತೀಚೆಗೆ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಇಲಾಖಾ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ಅವರ ಮುಂದೆ ಮತ್ತೊಮ್ಮೆ ಉಚಿತ ನೋಟ್‌ ಪುಸ್ತಕ ವಿತರಣೆಯ ಪ್ರಸ್ತಾವನೆ ಇಟ್ಟಿದ್ದಾರೆ. ವಿಧಾನಸೌಧದಲ್ಲಿ ಕಳೆದ ಸೆ.5ರಂದು ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಘೋಷಿಸಲಾಗಿದ್ದ ಈ ಯೋಜನೆಗೆ ಅನುದಾನ ನೀಡದಿದ್ದರೆ ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗುತ್ತದೆ. ಪ್ರತಿಪಕ್ಷಗಳಿಂದ ಹಾಗೂ ಶಿಕ್ಷಣ ಕ್ಷೇತ್ರದವರಿಂದ ಟೀಕೆಗೆ ಒಳಗಾಗಬಹುದು. ಹಾಗಾಗಿ 2026-27ನೇ ಸಾಲಿನಿಂದ ಯೋಜನೆ ಜಾರಿಗೆ ಮಾ.6ರಂದು ಮಂಡಿಸಲಿರುವ ಬರುವ ಸಾಲಿನ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಬೇಕೆಂದು ಕೋರಿದ್ದಾರೆ.

35
ಫ್ರೀ ನೋಟ್‌ಬುಕ್‌ ಪ್ರಸ್ತಾವ ಜೀವಂತ

ಇಲಾಖೆಯ ಉನ್ನತ ಮೂಲಗಳಿಂದ ‘ಕನ್ನಡಪ್ರಭ’ಕ್ಕೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಇದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಈಗಾಗಲೇ ಸರ್ಕಾರ ಉಚಿತವಾಗಿ ನೀಡುತ್ತಿರುವ ಸಮವಸ್ತ್ರ, ಶೂ, ಸಾಕ್ಸ್‌, ಪಠ್ಯಪುಸ್ತಕಗಳ ಜೊತೆಗೆ ನೋಟ್ ಪುಸ್ತಕಗಳೂ ದೊರೆಯಬಹುದಾದ ಪ್ರಸ್ತಾವನೆ ಇನ್ನೂ ಜೀವಂತವಾಗಿದೆ.

45
ಸೋರಿಕೆ ಹಣ ತಡೆದು ನೋಟ್‌ ಬುಕ್‌:

ಅಸಲಿಗೆ ಶಿಕ್ಷಣ ಇಲಾಖೆಯು ಉಚಿತ ನೋಟ್‌ ಬುಕ್‌ ವಿತರಣೆ ಯೋಜನೆಗೆ ಸರ್ಕಾರದಿಂದ ಹೆಚ್ಚುವರಿ ಹಣವನ್ನೇನೂ ಕೇಳಿಲ್ಲ. ಇಲಾಖೆಯ ವಿವಿಧ ಯೋಜನೆ, ಕಾರ್ಯಕ್ರಮಗಳಲ್ಲಿ ಸೋರಿಕೆಯಾಗುತ್ತಿರುವ ಹಣವನ್ನು ತಡೆದು ಈ ಹೊಸ ಯೋಜನೆಗೆ ಅನುದಾನ ಲಭ್ಯವಾಗುವಂತೆ ಮಾಡುವುದಾಗಿ ಸಿಎಂಗೆ ಭರವಸೆ ನೀಡಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಆದರೂ, ಹಣಕಾಸು ಇಲಾಖೆ ಯಾವ ಕಾರಣಕ್ಕೆ ಇನ್ನೂ ಸಮ್ಮತಿ ನೀಡಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಮತ್ತೊಂದೆಡೆ ಇಲಾಖೆ ಸಲ್ಲಿಸಿದ್ದ ಆರು ಪ್ರಸ್ತಾವನೆಗಳಲ್ಲಿ ಉಚಿತ ನೋಟ್‌ ಬುಕ್‌ ಯೋಜನೆ ಹೊರತುಪಡಿಸಿ ಉಳಿದ ಐದು ಯೋಜನೆಗಳಿಗೆ ಆರ್ಥಿಕ ಇಲಾಖೆ ಜ.25ರಂದು ಒಪ್ಪಿಗೆ ನೀಡಿದೆ. ಆದರೆ, ನೋಟ್‌ ಬುಕ್‌ ಯೋಜನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಹೇಳಿಲ್ಲ. ಹಾಗಾಗಿ ಪ್ರಸ್ತಾವನೆ ಇನ್ನೂ ಹಣಕಾಸು ಇಲಾಖೆಯ ಮುಂದೆ ಇದ್ದಂತೆಯೇ. ಬಜೆಟ್‌ನಲ್ಲಿ ಈ ಹೊಸ ಯೋಜನೆ ಘೋಷಿಸುವ ಕಾರಣಕ್ಕೆ ಅನುಮತಿ ನೀಡದೆಯೂ ಇರಬಹುದು ಎನ್ನಲಾಗುತ್ತಿದೆ.

55
50 ಲಕ್ಷ ಮಕ್ಕಳಿಗೆ ನೋಟ್‌ಬುಕ್‌ ನೀಡಲು ಬೇಕು 75 ಕೋಟಿ ರು.

ಶಿಕ್ಷಣ ಇಲಾಖೆಯ ಅಂದಾಜಿನ ಪ್ರಕಾರ, ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ 38 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ, ಅನುದಾನಿತ ಶಾಲೆಗಳಲ್ಲಿ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 50 ಲಕ್ಷ ಮಕ್ಕಳಿಗೆ ವಿಷಯವಾರು ತಲಾ 6 ನೋಟ್‌ ಬುಕ್‌ಗಳನ್ನು ವಿತರಿಸುವ ಆಲೋಚನೆ ಇಲಾಖೆಯದ್ದು. ಇದಕ್ಕಾಗಿ ಪ್ರತಿ ನೋಟ್‌ ಬುಕ್‌ಗೆ ಕನಿಷ್ಠ 25 ರು.ನಂತೆ ಸುಮಾರು 75 ಕೋಟಿ ರು.ನಷ್ಟು ಅನುದಾನ ಯೋಜನೆಗೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಅನುದಾನಕ್ಕಾಗಿ ಸರ್ಕಾರದ ಬಳಿ ಕೈಯೊಡ್ಡದೆ ಇಲಾಖೆಯ ವಿವಿಧ ಯೋಜನೆ, ಕಾರ್ಯಕ್ರಮಗಳಲ್ಲಿ ಸೋರಿಕೆಯಾಗುತ್ತಿರುವ ಅನುದಾನವನ್ನು ಉಳಿಸಿ ಯೋಜನೆ ಜಾರಿಗೊಳಿಸುವ ಲೆಕ್ಕಾಚಾರ ದಕ್ಷ ಅಧಿಕಾರಿಗಳದ್ದಾಗಿದೆ.

Read more Photos on
click me!

Recommended Stories