ವಿಶ್ವವೇ ಈಗ ಡಿಜಿಟಲೈಜ್ ಆಗಿದೆ. ಬಹುತೇಕ ಎಲ್ಲಾ ಕೆಲಸಗಳು, ವ್ಯವಹಾರಗಳು ಡಿಜಿಟಲ್ ಮೂಲಕವೇ ನಡೆಯುತ್ತಿದೆ. ಇನ್ನು ಪ್ರಯಾಣದ ವೇಳೆಯೂ ಗೂಗಲ್ ಮ್ಯಾಪ್ ಅತೀ ಹೆಚ್ಚು ಬಳಸಲಾಗುತ್ತದೆ. ದಾರಿ ಸರಿಯಾಗಿ ಗೊತ್ತಿಲ್ಲದಿದ್ದರೆ, ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಇದೇ ಗೂಗಲ್ ಮ್ಯಾಪ್ ಎಡವಟ್ಟಿನಿಂದ, ಇದೀಗ ಚಾಲಕ ಸಾವನ್ನಪ್ಪಿದ್ದಾನೆ.
ಭಾರತದಲ್ಲಿ ಗೂಗಲ್ ಮ್ಯಾಪ್ ಮೂಲಕ ತೆರಳಿ ದಾರಿ ತಪ್ಪಿ, ಕಾಡು ತಲುಪಿದೆ. ರಸ್ತೆ ಇಲ್ಲದ ದಾರಿಯಲ್ಲಿ ಸಂಚರಿಸಿದ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಆದರೆ ಇದೀಗ ಗೂಗಲ್ ಮ್ಯಾಪ್ ನಂಬಿ ಸಾವನ್ನಪ್ಪಿದ ಘಟನೆಯೂ ನಡೆದುಹೋಗಿದೆ.
ಮಹಾರಾಷ್ಟ್ರದ 34 ವರ್ಷದ ಸತೀಶ್ ಘುಲೆ, ತಮ್ಮ ಟೊಯೋಟಾ ಫಾರ್ಚುನರ್ ಕಾರಿನ ಮೂಲಕ ಅಹಮ್ಮದನಗರದಿಂದ ಅಕೊಲೆಗೆ ತೆರಳಿದ್ದಾರೆ. ಇಬ್ಬರು ಮಿತ್ರರ ಜೊತೆ ಕಾಲ್ಸುಬಾಯಿ ಪರ್ವತ ಚಾರಣಕ್ಕೆ ತೆರಳಿದ್ದಾರೆ.
ಕಾಲ್ಸುಬಾಯಿ ಮಹಾರಾಷ್ಟ್ರದ ಅತ್ಯಂತ ಎತ್ತರದ ಚಾರಣ ಪ್ರದೇಶವಾಗಿದೆ. ಆದರೆ ದಾರಿ ಸರಿಯಾಗಿ ಗೊತ್ತಿಲ್ಲದ ಸತೀಶ್ ಘುಲೆ ಸೇರಿದಂತೆ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ಬಳಸಿ ಕಾರಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ.
ಗೂಗಲ್ ಮ್ಯಾಪ್ ಕಾಲ್ಸುಬಾಯಿ ಚಾರಣ ಪ್ರದೇಶಕ್ಕೆ ತೆರಳಲು ದೂರಿ ಸೂಚಿಸಿದೆ. ಅದರಂತೆ ಸತೀಶ್ ತೆರಳಿದ್ದಾರೆ. ಹತ್ತಿರದ ರೂಟ್ ಮೂಲಕ ಗೂಗಲ್ ಈ ಮೂವರನ್ನು ಕರೆದೊಯ್ದಿದೆ.
ಗೂಗಲ್ ಮುಂದೆ ಸಣ್ಣ ಸೇತುವೆ ಸೂಚನೆ ನೀಡಿದೆ. ಸೇತುವೆ ದಾಟಿದ ಬಳಿಕ ತಿರುವಿನ ಸೂಚನೆಯನ್ನು ನೀಡಿದೆ. ಈ ಸೂಚನೆಯಂತೆ ಮುಂದೆ ಸಾಗಿದ ಟೊಯೋಟಾ ಫಾರ್ಚುನರ್ ಕಾರಿನೊಳಗೆ ನೀರು ಬರಲಾರಂಬಿಸಿದೆ.
ಗೂಗಲ್ ಮ್ಯಾಪ್ ಸೂಚಿಸಿದ ಸೇತುವ 4 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮುಳುಗಡೆಯಾಗಿದೆ. ಪಿಂಪಾಲಗಾಂವ್ ಡ್ಯಾಮ್ ನೀರನ್ನು ಬಿಟ್ಟ ಕಾರಣ ಸೇತುವೆ ಮುಳುಗಡೆಯಾಗಿದೆ. ಈ ಮಾಹಿತಿ ಗೂಗಲ್ ಮ್ಯಾಪ್‌ನಲ್ಲಿ ಅಪ್‌ಡೇಟ್ ಆಗಿಲ್ಲ.
ಇತ್ತ PWD ಕೂಡ ಇಲ್ಲಿ ಯಾವುದೇ ಸೂಚನಾ ಫಲಕ ಹಾಕಿಲ್ಲ. ಗೂಗಲ್ ಮ್ಯಾಪ್ ಇನ್ನು 100 ಮೀಟರ್ ಮುಂದೆ ಸೇತುವೆ ಎಂಬ ಮಾಹಿತಿ ನೀಡಿದಾಗಲೆ ರಸ್ತೆಯಲ್ಲಿ ನೀರು ನಿಂತುಕೊಂಡಿತ್ತು. ದಾರಿಯ ಅರಿವು ಇಲ್ಲದ ಸತೀಶ್, ಸೇತವೆಯುದ್ದಕ್ಕೂ ಇದೇ ರೀತಿ ಇರಬಹಹುದು ಎಂದು ಮುಂದೆ ಸಾಗಿದ್ದಾರೆ.
ಕಾರು ಸೇತುವೆಗೆ ಹತ್ತಿರ ಬರುತ್ತಿದ್ದಂತೆ ನೀರಿನಲ್ಲಿ ಮುಳುಗಿದೆ. ಸತೀಶ್ ಘುಲೆ ಇಬ್ಬರು ಸ್ನೇಹಿತರು ಹರಸಾಹಸ ಮಾಡಿ ಈಜಿದ್ದಾರೆ. ಆದರೆ ಸತೀಶ್ ಘುಲೆಗೆ ಈಜು ಬರುವುದಿಲ್ಲ. ಹೀಗಾಗಿ ಏನೂ ಮಾಡಲಾಗದೆ ನೀರಿನಲ್ಲಿ ಪ್ರಾಣಬಿಟ್ಟಿದ್ದಾರೆ.
ದಡ ಸೇರಿದ ಸ್ನೇಹಿತರು ಸಹಾಯಕ್ಕಿ ಕೂಗಿದ್ದಾರೆ. ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ರಕ್ಷಣೆಗೆ ಮುಂದಾಗಿದ್ದಾರೆ. ರಾತ್ರಿ ವೇಳೆ ಸ್ಥಳೀಯರು ಒಟ್ಟಾಗಿ ರಕ್ಷಣೆ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಸತೀಶ್ ಘುಲೆ ಸಾವನ್ನಪಿದ್ದರು.