ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ, ಗಂಡನ ಮನೆಯಲ್ಲಿ ನಿಗೂಢ ಹೆಣವಾದ ಗೃಹಿಣಿ ರಕ್ಷಿತಾ!

Published : Oct 06, 2025, 05:05 PM IST

ಬೆಂಗಳೂರಿನ ಲಗ್ಗೆರೆಯಲ್ಲಿ ಗೃಹಿಣಿ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಪತಿ ರವೀಶ್ ಮತ್ತು ಆತನ ಸಹೋದರ ನಿರಂತರ ಕಿರುಕುಳ ನೀಡುತ್ತಿದ್ದು, ಅವರೇ ಕೊಲೆ ಮಾಡಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

PREV
16
ಹೆಣ್ಣು ಮಗು ಹೆತ್ತ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೆಣ್ಣು ಮಗು ಹುಟ್ಟಿದ್ದರಿಂದ ಮನನೊಂದಿದ್ದ ಪತಿ ಮತ್ತು ಆತನ ಸಹೋದರನ ನಿರಂತರ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಗಂಡ ಮತ್ತು ಆತನ ಸಹೋದರನೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಲಗ್ಗೆರೆ ಮುನೇಶ್ವರ ಬ್ಲಾಕ್ ಬಳಿ ಈ ದುರಂತ ನಡೆದಿದೆ. ಮೃತ ಗೃಹಿಣಿಯನ್ನು ಹಾಸನದ ಅರಸೀಕೆರೆ ಮೂಲದ ರಕ್ಷಿತಾ (26) ಎಂದು ಗುರುತಿಸಲಾಗಿದೆ.

26
ಹೆಣ್ಣು ಮಗುವಿನ ಕಾರಣಕ್ಕೆ ನಿರಂತರ ಕಿರುಕುಳ

ಧನಲಕ್ಷ್ಮಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ರವೀಶ್ ಎಂಬುವವರನ್ನು ರಕ್ಷಿತಾ ಕಳೆದ 4 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 3 ವರ್ಷದ ಹೆಣ್ಣು ಮಗುವಿದೆ. ಆದರೆ, ಮದುವೆಯಾದಾಗಿನಿಂದಲೂ ರವೀಶ್ ಪತ್ನಿ ರಕ್ಷಿತಾ ಜೊತೆ ಪದೇ ಪದೇ ಗಲಾಟೆ ಮಾಡುತ್ತಿದ್ದರು. ಇದಕ್ಕೆ ರವೀಶ್ ಮನೆಯಲ್ಲಿಯೇ ವಾಸವಾಗಿದ್ದ ಆತನ ಸಹೋದರ ಲೋಕೇಶ್ ಕೂಡ ಸಾಥ್ ನೀಡುತ್ತಿದ್ದ ಎನ್ನಲಾಗಿದೆ.

36
ಸಮಸ್ಯೆಗೆ ಮೂಲ ಕಾರಣ: ಹೆಣ್ಣು ಮಗು

ನಮ್ಮ ಮನೆಗೆ ಗಂಡು ಮಗು ಬೇಕಿತ್ತು, ಹೆಣ್ಣು ಮಗು ಬೇಡ, ಎಂದು ರವೀಶ್ ತನ್ನ ಪತ್ನಿ ರಕ್ಷಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಮಗು ಹುಟ್ಟಿದಾಗ ಹೆಣ್ಣು ಮಗು ಎಂದು ಕೋಪಗೊಂಡು ಆಸ್ಪತ್ರೆ ಬಿಲ್ ಕಟ್ಟಲು ಕೂಡ ನಿರಾಕರಿಸಿದ್ದನು. ಅಷ್ಟೇ ಅಲ್ಲ, ಮಗು ಹುಟ್ಟಿ 3 ತಿಂಗಳಾದರೂ ರವೀಶ್ ಮಗುವಿನ ಮುಖವನ್ನೇ ನೋಡಿರಲಿಲ್ಲ ಹಾಗೂ ಮಗುವಿಗೆ ಮುಡಿ ಕೊಡಿಸುವ ಸಂದರ್ಭದಲ್ಲಿಯೂ ಮಗುವನ್ನು ನೋಡಲು ಬಂದಿರಲಿಲ್ಲ ಎಂದು ರಕ್ಷಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.

46
ಮಗುವಿನ ಮೇಲೂ ಹಲ್ಲೆ:

ರವೀಶ್ ಮತ್ತು ರಕ್ಷಿತಾಳನ್ನು ಸಂಬಂಧಿಕರು ರಾಜಿ ಸಂಧಾನ ಮಾಡಿ ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿದ್ದರು. ಅಂದಿನಿಂದ ಪ್ರತಿದಿನ ಗಲಾಟೆ ಮಾಡಿ ಹಲ್ಲೆ ಮಾಡುವುದು ಮುಂದುವರೆದಿತ್ತು. ಕಳೆದ ಆರೇಳು ತಿಂಗಳಿಂದಂತೂ ಹಿಂಸೆ ತಾರಕಕ್ಕೇರಿತ್ತು. 

ಒಂದು ವಾರದ ಹಿಂದೆ ಕೋಪದಲ್ಲಿ ರವೀಶ್ ತನ್ನ 3 ವರ್ಷದ ಹೆಣ್ಣು ಮಗುವಿನ ಕಿವಿಗೆ ಸುಟ್ಟಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಕೂಡ ರವೀಶ್ ಮತ್ತು ಲೋಕೇಶ್ ಇಬ್ಬರೂ ಸೇರಿಕೊಂಡು ರಕ್ಷಿತಾ ಜೊತೆ ಗಲಾಟೆ ಮಾಡಿದ್ದರು. ಇದರಿಂದ ತೀವ್ರ ಮನನೊಂದ ರಕ್ಷಿತಾ ಅವರು ಇಂದು (ಸೋಮವಾರ) ಬೆಳಗ್ಗೆ ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

56
ಕೊಲೆ ಮಾಡಿ ನೇಣು ಹಾಕಿದ್ದಾರೆ: ಕುಟುಂಬಸ್ಥರ ಆರೋಪ

ಬೆಳಗ್ಗೆ ರಕ್ಷಿತಾ ತಂದೆ ತಿಮ್ಮರಾಜು ಅವರು ಮಗಳಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದೇ ಇದ್ದಾಗ, ಅವರು ಲಗ್ಗೆರೆಯಲ್ಲಿರುವ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಮನೆ ಮಾಲೀಕರ ಬಳಿ ಕೀ ಪಡೆದು ಬಾಗಿಲು ತೆರೆದಾಗ, ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಇಷ್ಟೊಂದು ಕಿರುಕುಳ ಕೊಡುತ್ತಿದ್ದವರು ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ತಿಮ್ಮರಾಜು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರವೀಶ್ ಮತ್ತು ಲೋಕೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

66
ಹಾಸನ ಹುಡುಗಿ, ತುಮಕೂರು ಹುಡುಗ

ಮೃತ ರಕ್ಷಿತಾ ಅವರ ಕುಟುಂಬ ಹಾಸನದ ಅರಸೀಕೆರೆ ಮೂಲದವರಾಗಿದ್ದು, ಆರೋಪಿ ರವೀಶ್ ತುಮಕೂರು ಜಿಲ್ಲೆ ಕುಣಿಗಲ್ ಬಳಿಯ ಹುಲಿಯೂರುದುರ್ಗ ಮೂಲದವನಾಗಿದ್ದಾನೆ. ಈ ಸಂಬಂಧ ಲಗ್ಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read more Photos on
click me!

Recommended Stories