WTC Final: ಆಸ್ಟ್ರೇಲಿಯಾ ಎದುರು ಮೊದಲ ದಿನ ಟೀಂ ಇಂಡಿಯಾ ಮಾಡಿದ 4 ಮಹಾ ಎಡವಟ್ಟುಗಳಿವು..!

First Published Jun 8, 2023, 11:50 AM IST

ಲಂಡನ್‌(ಜೂ.08): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಇಲ್ಲಿನ ದಿ ಓವಲ್ ಮೈದಾನ ಆತಿಥ್ಯ ವಹಿಸಿದೆ. ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ತಂಡವು ಮೇಲುಗೈ ಸಾಧಿಸಿದೆ. ಆಸೀಸ್‌ ಮೇಲುಗೈ ಸಾಧಿಸಲು ಟೀಂ ಇಂಡಿಯಾ ಮಾಡಿಕೊಂಡ 4 ಮಹಾ ಪ್ರಮಾದಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ದಶಕದ ಬಳಿಕ ಐಸಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಕನವರಿಕೆಯಲ್ಲಿರುವ ಟೀಂ ಇಂಡಿಯಾ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಮೊದಲ ದಿನವೇ ಹಿನ್ನಡೆ ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತದ ಹೊರತಾಗಿಯೂ, ಟ್ರಾವಿಸ್ ಹೆಡ್ ಬಾರಿಸಿದ ಅಜೇಯ ಶತಕ ಹಾಗೂ ಸ್ಟೀವ್ ಸ್ಮಿತ್ ಬಾರಿಸಿದ ಅಜೇಯ 95 ರನ್‌ಗಳ ನೆರವಿನಿಂದ ಮೊದಲ ದಿನದಾಟದಂತ್ಯಕ್ಕೆ ಕಾಂಗರೂ ಪಡೆ 3 ವಿಕೆಟ್ ಕಳೆದುಕೊಂಡು 327 ರನ್ ಬಾರಿಸಿದೆ.

ಆಸೀಸ್ ಎದುರು ಮೊದಲ ದಿನದಾಟದಲ್ಲೇ ಹಿನ್ನಡೆ ಅನುಭವಿಸಲು ಕಾರಣವಾದ ಅಂಶಗಳೇನು ಎನ್ನುವುದರ ಕಂಪ್ಲೀಟ್ ಮಾಹಿತಿಯನ್ನು ನಾವೀಗ ನೋಡೋಣ ಬನ್ನಿ.

1. ಟಾಸ್ ಗೆದ್ದು ಬೌಲಿಂಗ್ ಆಯ್ಕೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದೋರೇ ಬಾಸ್ ಎನ್ನುವ ಮಾತಿದೆ. ಮೋಡ ಕವಿದ ವಾತಾವರಣವಿದ್ದಿದ್ದರಿಂದ ಪಿಚ್‌ ಬೌಲರ್‌ಗಳಿಗೆ ನೆರವಾಗಬಹುದೆಂದು ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಆದರೆ ಸಮಯ ಕಳೆದಂತೆ ಪಿಚ್‌ ಬ್ಯಾಟರ್‌ಗಳಿಗೆ ಅನುಕೂಲಕರವಾಗಿ ಬದಲಾಯಿತು.

2. ಅಶ್ವಿನ್ ಕೈ ಬಿಟ್ಟು ದೊಡ್ಡ ತಪ್ಪು ಮಾಡಿತಾ ಟೀಂ ಇಂಡಿಯಾ?

ಅನುಭವಿ ಆಫ್‌ಸ್ಪಿನ್ನರ್, ಭಾರತದ ನಂ.1 ಟೆಸ್ಟ್ ಬೌಲರ್ ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಿದ್ದೂ, ಅಶ್ವಿನ್‌ ಅವರನ್ನು ಮಹತ್ವದ ಫೈನಲ್‌ಗೆ ಬೆಂಚ್ ಕಾಯಿಸುವಂತೆ ಮಾಡಿದ್ದು ಹಿನ್ನಡೆಗೆ ಕಾರಣ. ಸಾಕಷ್ಟು ಬೌಲಿಂಗ್ ವೇರಿಯೇಷನ್ ಮಾಡುವ ಸಾಮರ್ಥ್ಯವಿರುವ ಅಶ್ವಿನ್‌, ಆಸೀಸ್‌ ಎಡಗೈ ಬ್ಯಾಟರ್‌ಗಳನ್ನು ಬಲಿಪಡೆಯಲು ಯಶಸ್ವಿಯಾಗುವ ಸಾಧ್ಯತೆಯಿತ್ತು.

3.ಉಮೇಶ್ ಯಾದವ್‌ಗೆ ಸ್ಥಾನ ನೀಡಿದ್ದು:

ಉಮೇಶ್ ಯಾದವ್, 16ನೇ ಆವೃತ್ತಿಯ ಐಪಿಎಲ್ ಸಂದರ್ಭದಲ್ಲಿಯೇ ಗಾಯಗೊಂಡಿದ್ದರು. ಸಾಕಷ್ಟು ಸಮಯದಿಂದ ಕ್ರಿಕೆಟ್ ಆಡದ ಉಮೇಶ್ ಯಾದವ್ ಅವರನ್ನು ಏಕಾಏಕಿ ಟೆಸ್ಟ್ ವಿಶ್ವಕಪ್‌ನಲ್ಲಿ ಕಣಕ್ಕಿಳಿಸಲಾಯಿತು. ಮೊದಲ ದಿನ ಉಮೇಶ್ ಯಾದವ್ 14 ಓವರ್ ಬೌಲಿಂಗ್ ಮಾಡಿ 54 ರನ್ ಬಿಟ್ಟುಕೊಟ್ಟಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

4. ಕೈ ಕೊಟ್ಟ 4 ವೇಗಿ, ಒಂದು ಸ್ಪಿನ್ನರ್ ಸೂತ್ರ:

ಟೀಂ ಇಂಡಿಯಾ 4 ವೇಗಿ ಹಾಗೂ ಒಂದು ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿದ ರಣತಂತ್ರ ಮೊದಲ ದಿನವೇ ಫೇಲ್ ಎನ್ನುವಂತೆ ಭಾಸವಾಗುತ್ತಿದೆ. ಉಮೇಶ್ ಯಾದವ್ ಹಾಗೂ ಜಡ್ಡು ಪರಿಣಾಮಕಾರಿ ದಾಳಿ ನಡೆಸಲಿಲ್ಲ. ಇನ್ನು ಸಿರಾಜ್, ಶಮಿ ಹಾಗೂ ಶಾರ್ದೂಲ್ ಒಂದೊಂದು ವಿಕೆಟ್ ಕಬಳಿಸಿದರಾದರೂ, ಆಸೀಸ್ ರನ್‌ ವೇಗಕ್ಕೆ ಕಡಿವಾಣ ಹಾಕಲು ವಿಫಲರಾದರು.

ಮೊದಲ ದಿನದ ವೈಫಲ್ಯವನ್ನು ಮೆಟ್ಟಿನಿಂತು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಎರಡನೇ ದಿನದಾಟದಲ್ಲಿ ಕಮ್‌ಬ್ಯಾಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

click me!