WPL 2023: ಈಗಲೂ ಇದೆ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‌ಗೇರುವ ಅವಕಾಶ..! ಆದರೆ..?

First Published Mar 20, 2023, 2:48 PM IST

ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ 5 ಸೋಲುಗಳ ಬಳಿಕ ಎಚ್ಚೆತ್ತುಕೊಂಡು ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದೆ. ಕೇವಲ ಎರಡು ಪಂದ್ಯ ಗೆದ್ದಿರುವ ಆರ್‌ಸಿಬಿಗೆ ಅದೃಷ್ಟವು ಸಾಥ್ ನೀಡಿದರೆ ಈಗಲೂ ಸಹಾ ಪ್ಲೇ ಆಫ್‌ಗೇರಬಹುದು. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 5 ಸೋಲುಗಳನ್ನು ಕಾಣುವ ಮೂಲಕ ದಯನೀಯ ವೈಫಲ್ಯ ಅನುಭವಿಸಿದ್ದ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ.
 

ಆರ್‌ಸಿಬಿ ತಂಡವು ಕಳೆದೆರಡು ಪಂದ್ಯಗಳಲ್ಲಿ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಇದೀಗ ಇನ್ನೊಂದು ಸ್ಥಾನಕ್ಕಾಗಿ ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
 

ಮೂರನೇ ತಂಡವಾಗಿ ಪ್ಲೇ ಆಫ್‌ಗೇರುವ ಹೆಚ್ಚಿನ ಅವಕಾಶ ಯುಪಿ ವಾರಿಯರ್ಸ್‌ ತಂಡಕ್ಕಿದ್ದರೆ, ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ತಮ್ಮ ಪ್ರದರ್ಶನದ ಜತೆಗೆ ಬೇರೆ ಪಂದ್ಯಗಳ ಪ್ರದರ್ಶನದ ಮೇಲೆ ತಮ್ಮ ಪ್ಲೇ ಆಫ್‌ ಸ್ಥಾನ ನಿರ್ಧಾರವಾಗಲಿದೆ.
 

ಆರ್‌ಸಿಬಿ ಪ್ಲೇ ಆಫ್‌ಗೇರೋದು ಹೇಗೆ?

ಈಗಾಗಲೇ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್ ಜೈಂಟ್ಸ್ ಎದುರು ಗೆಲುವು ಸಾಧಿಸಿರುವ ಆರ್‌ಸಿಬಿ, ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ಎದುರು ದೊಡ್ಡ ಅಂತರದ ಗೆಲುವು ಸಾಧಿಸಬೇಕು.

ಇನ್ನು ಇದಷ್ಟೇ ಅಲ್ಲದೇ ಯುಪಿ ವಾರಿಯರ್ಸ್ ತಂಡವು ಇನ್ನು ಎರಡು ಪಂದ್ಯಗಳನ್ನು ಆಡಬೇಕಿದ್ದು, ಆ ಎರಡೂ ಪಂದ್ಯಗಳಲ್ಲೂ ಯುಪಿ ವಾರಿಯರ್ಸ್‌ ಸೋಲಬೇಕು. ಇನ್ನು ಇಂದು ನಡೆಯಲಿರುವ ಗುಜರಾತ್ ಹಾಗೂ ಯುಪಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಗುಜರಾತ್ ತಂಡವು ಅಲ್ಪ ಅಂತರದಲ್ಲಿ ಗೆಲುವು ಸಾಧಿಸಬೇಕು.
 

ಒಂದುವೇಳೆ ಇಂದು ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ಗೆಲುವು ಸಾಧಿಸಿದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್‌ ತಂಡಗಳು ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿವೆ.
 

click me!