ಕ್ರಿಕೆಟ್‌ನಲ್ಲಿ ಗುಡುಗಿದ ಮರಿ ಸೆಹ್ವಾಗ್; ಡಬಲ್ ಸೆಂಚುರಿ ಸಿಡಿಸಿದ ಆರ್ಯವೀರ್!

First Published | Nov 22, 2024, 11:59 AM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಜೇಯ ಡಬಲ್ ಸೆಂಚುರಿ (200*) ಬಾರಿಸಿದ್ದಾರೆ. ಈ ಮೂಲಕ ತಂದೆಯ ಹಾದಿಯಲ್ಲೇ ಮಗನ ಪಯಣ ಸಾಗುತ್ತಿದೆ

ಆರ್ಯವೀರ್ ಡಬಲ್ ಸೆಂಚುರಿ

ವಿರೇಂದ್ರ ಸೆಹ್ವಾಗ್ ಕ್ರಿಕೆಟ್ ಜಗತ್ತಿನಲ್ಲಿ ಚಿರ ಪರಿಪರಿಚಿತ ಹೆಸರು. ಡ್ಯಾಶಿಂಗ್ ಓಪನರ್ ಆಗಿ ಟೀಂ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿ ಭಾರತಕ್ಕೆ ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ತಂದೆಯ ಹಾದಿಯಲ್ಲೇ ಈಗ ಜೂನಿಯರ್ ಸೆಹ್ವಾಗ್ ಕೂಡ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಲು ಪ್ರಾರಂಭಿಸಿದ್ದಾನೆ. ಸೆಹ್ವಾಗ್ ಪುತ್ರ ಆರ್ಯವೀರ್ ಡಬಲ್ ಸೆಂಚುರಿಯಿಂದ ಅಬ್ಬರಿಸಿದ್ದಾನೆ.

ಆರ್ಯವೀರ್ ಸೆಹ್ವಾಗ್

ಡಬಲ್ ಸೆಂಚುರಿ ದಾಖಲೆ ಪುಸ್ತಕ ತೆರೆದರೆ ಸೆಹ್ವಾಗ್ ದಾಖಲೆಗಳು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತವೆ. ಸೆಹ್ವಾಗ್ ಎಂದರೆ ಪ್ರಪಂಚದಾದ್ಯಂತ ಬೌಲರ್‌ಗಳು ಭಯಪಡುವ ಬ್ಯಾಟರ್. ಈಗ ಅವರ ಹಾದಿಯಲ್ಲೇ ಅವರ ಮಗ ಕೂಡ ನಡೆಯುತ್ತಿದ್ದಾನೆ. ಸೆಹ್ವಾಗ್ ಪುತ್ರ ಕೂಡ ಡಬಲ್ ಸೆಂಚುರಿ ಬಾರಿಸಿ ಸಂಚಲನ ಮೂಡಿಸಿದ್ದಾನೆ. ಮಗ ಆರ್ಯವೀರ್‌ಗೂ ಕೂಡ ಸ್ಪೋಟಕ ಇನ್ನಿಂಗ್ಸ್‌ಗಳನ್ನು ಆಡುವುದು ಇಷ್ಟ ಎಂದು ಸಾಬೀತುಪಡಿಸಿದ್ದು, ಕೂಚ್ ಬೆಹಾರ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ತನ್ನ ಡಬಲ್ ಸೆಂಚುರಿ ಇನ್ನಿಂಗ್ಸ್‌ನಿಂದ ಮಿಂಚಿದ್ದಾನೆ.

Tap to resize

ಆರ್ಯವೀರ್ ಡಬಲ್ ಸೆಂಚುರಿ ಸಿಡಿಸಿದರು

17 ವರ್ಷದ ಆರ್ಯವೀರ್ ಡಬಲ್ ಸೆಂಚುರಿ ಬಾರಿಸಿದ್ದಾರೆ. ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ವಯಸ್ಸು ಕೇವಲ 17 ವರ್ಷ. ಅವರು 18 ಅಕ್ಟೋಬರ್ 2007 ರಂದು ಜನಿಸಿದರು. ದಿಗ್ಗಜ ಬ್ಯಾಟರ್ ಸೆಹ್ವಾಗ್ ಅವರನ್ನು ಹತ್ತಿರದಿಂದ ನೋಡಿ ಬೆಳೆದ ಆರ್ಯವೀರ್ ತನ್ನ ತಂದೆಯ ಆಟದ ಶೈಲಿಯನ್ನು ಅಳವಡಿಸಿಕೊಂಡಿದ್ದಾನೆ. ನವೆಂಬರ್ 21 ರಂದು ಶಿಲ್ಲಾಂಗ್‌ನ MCA ಕ್ರಿಕೆಟ್ ಮೈದಾನದಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ದಿಲ್ಲಿ ಪರ ಆರ್ಯವೀರ್ ಡಬಲ್ ಸೆಂಚುರಿ ಸಿಡಿಸಿ ಸಂಚಲನ ಮೂಡಿಸಿದರು. ಮೇಘಾಲಯ ಬೌಲರ್‌ಗಳ ಮೇಲೆ ಅಬ್ಬರಿಸಿ  229 ಎಸೆತಗಳಲ್ಲಿ ಆರ್ಯವೀರ್ 200* ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಡಬಲ್ ಸೆಂಚುರಿ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್‌ಗಳು ಮತ್ತು 34 ಬೌಂಡರಿಗಳು ಸೇರಿದ್ದವು.

ದಿಲ್ಲಿಗೆ ಸೂಪರ್ ಇನ್ನಿಂಗ್ಸ್.

ಆರ್ಯವೀರ್ ಅವರ ಮ್ಯಾರಥಾನ್ ಇನ್ನಿಂಗ್ಸ್‌ನಿಂದ ಮೇಘಾಲಯ ವಿರುದ್ಧ ದಿಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ದಿಲ್ಲಿ ತಂಡ ಕೇವಲ 2 ವಿಕೆಟ್‌ಗಳ ನಷ್ಟಕ್ಕೆ 468 ರನ್ ಗಳಿಸಿದೆ. ಮೇಘಾಲಯ ತಂಡ ಇಲ್ಲಿಯವರೆಗೆ ದಿಲ್ಲಿಗಿಂತ 208 ರನ್‌ಗಳ ಹಿಂದಿದೆ. ಕಳೆದ ತಿಂಗಳು ಸೆಹ್ವಾಗ್ ಪುತ್ರ ಆರ್ಯವೀರ್ ವಿನೂ ಮಂಕಡ್ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಮಣಿಪುರ ವಿರುದ್ಧದ ಪಂದ್ಯದಲ್ಲಿ 49 ರನ್ ಗಳಿಸಿ ಅರ್ಧಶತಕಕ್ಕೆ 1 ರನ್‌ನಿಂದ ವಂಚಿತರಾಗಿದ್ದರು. ಆದರೆ, ಈಗ ಡಬಲ್ ಸೆಂಚುರಿ ಬಾರಿಸಿದ್ದಾರೆ.

ಆರ್ಯವೀರ್ ಬಗ್ಗೆ ಸೆಹ್ವಾಗ್ ಏನು ಹೇಳಿದ್ದಾರೆ?

ಸೆಹ್ವಾಗ್ ಕೆಲವು ದಿನಗಳ ಹಿಂದೆ ತಮ್ಮ ಮಗ ಆರ್ಯವೀರ್ ಬಗ್ಗೆ ಮಾತನಾಡಿದ್ದರು. ತಮ್ಮ ಇಬ್ಬರು ಪುತ್ರರು ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು ಮತ್ತು ಕ್ರಿಕೆಟಿಗರಾಗಬೇಕೆಂಬ ಒತ್ತಡವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೆಹ್ವಾಗ್ ಮಾತ್ರವಲ್ಲ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಕೆಲವು ಕ್ರಿಕೆಟಿಗರ ಪುತ್ರರು ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಸಚಿನ್ ಪುತ್ರ ಅರ್ಜುನ್ ಕೂಡ ಕಳೆದ ವರ್ಷ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ್ದು ಎಲ್ಲರಿಗೂ ತಿಳಿದಿದೆ.

Latest Videos

click me!