ಕೆಎಲ್ ರಾಹುಲ್
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಹೊಸ ಸೀಸನ್‌ಗೂ ಮುನ್ನ ಆಟಗಾರರಿಗಾಗಿ ಮೆಗಾ ಹರಾಜು ನಡೆಯಲಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ ಆಟಗಾರರ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿವೆ.
ಅನಿರೀಕ್ಷಿತವಾಗಿ ಹಲವಾರು ಸ್ಟಾರ್ ಆಟಗಾರರನ್ನು ಫ್ರಾಂಚೈಸಿಗಳು ಬಿಟ್ಟಿವೆ. ಆದಾಗ್ಯೂ, ಅಂತಹ ಕೆಲವು ಆಟಗಾರರಿಗಾಗಿ ಹರಾಜಿನಲ್ಲಿ ದೊಡ್ಡ ಪೈಪೋಟಿ ನಡೆಯಲಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಂತಹವರಲ್ಲಿ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಒಬ್ಬರು.
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್
ಐಪಿಎಲ್ 2025 ಮೆಗಾ ಹರಾಜಿನ ಬಗ್ಗೆ ಕ್ರಿಕೆಟ್ ವಲಯದಲ್ಲಿ ಈಗಾಗಲೇ ಉತ್ಸಾಹ ಹೆಚ್ಚಿದೆ. ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವಾರು ಭಾರತೀಯ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆಯಾ ಆಟಗಾರರೊಂದಿಗೆ ಫ್ರಾಂಚೈಸಿಗಳು ಚರ್ಚೆಗಳನ್ನು ಆರಂಭಿಸಿವೆ ಎಂಬ ಮಾಹಿತಿ ಇದೆ.
ಭಾರತದ ದಿಗ್ಗಜ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿ, ಮುಂಬರುವ ಮೆಗಾ ಹರಾಜಿನಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಬೇಡಿಕೆಯ ಆಟಗಾರ ಎಂದು ಭವಿಷ್ಯ ನುಡಿದಿದ್ದಾರೆ. ಮುಖ್ಯವಾಗಿ ಕೆ ಎಲ್ ರಾಹುಲ್ 2 ತಂಡಗಳ ಪೈಪೋಟಿ ನಡೆಸಲಿವೆ ಎಂದು ಹೇಳಿದ್ದಾರೆ.
ಅಕ್ಟೋಬರ್ 31 ರಂದು ಎಲ್ಲಾ ತಂಡಗಳು ರೀಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕ್ಯಾಪ್ಟನ್ ಕೆ ಎಲ್ ರಾಹುಲ್ ಅವರನ್ನು ಬಿಟ್ಟು ಐದು ಆಟಗಾರರನ್ನು ಲಖನೌ ತಂಡ ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಇದ್ದಾರೆ.
ಇದರಿಂದ ಕೆ ಎಲ್ ರಾಹುಲ್ ಹರಾಜಿಗೆ ಬಂದಿದ್ದಾರೆ. ಯಾವ ತಂಡ ಅವರನ್ನು ಖರೀದಿಸುತ್ತದೆ ಎಂಬುದು ಈಗ ಎಲ್ಲರ ಮನದಲ್ಲಿ ಮೂಡುತ್ತಿರುವ ಪ್ರಶ್ನೆ. ಇದೀಗ ಸುನಿಲ್ ಗವಾಸ್ಕರ್, ಕೆ ಎಲ್ ರಾಹುಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸುನಿಲ್ ಗವಾಸ್ಕರ್ ಮಾತನಾಡಿ, 'ಕೆ ಎಲ್ ರಾಹುಲ್ ಅವರನ್ನು ಬೆಂಗಳೂರು ಮತ್ತು ಚೆನ್ನೈ ತಂಡಗಳು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಹೈದರಾಬಾದ್ ಕೂಡ ಈ ಪೈಪೋಟಿಗೆ ಬರಬಹುದು. ಆದರೆ ಬೆಂಗಳೂರು ಖಂಡಿತವಾಗಿಯೂ ಕೆಎಲ್ ರಾಹುಲ್ ಅವರ ತವರು. ಆ ತಂಡದೊಂದಿಗೆ ಸೇರಲು ಅವರು ಉತ್ಸುಕರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮದೇ ಪ್ರೇಕ್ಷಕರ ಮುಂದೆ ಆಡಲು ಬಯಸುತ್ತಾರೆ. ಆದ್ದರಿಂದ ಬೆಂಗಳೂರು ಕೆ ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು' ಎಂದು ಹೇಳಿದ್ದಾರೆ.
ಕೆ ಎಲ್ ರಾಹುಲ್ ಬ್ಯಾಟ್ ಕಳೆದ ಕೆಲವು ತಿಂಗಳುಗಳಿಂದ ಸೈಲೆಂಟ್ ಆಗಿದೆ. ಐಪಿಎಲ್‌ನಲ್ಲಿ ಉತ್ತಮ ರನ್ ಗಳಿಸುತ್ತಿದ್ದರೂ, ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲರ ದೃಷ್ಟಿ ರಾಹುಲ್ ಮೇಲಿದೆ. ಆದರೆ ಅದಕ್ಕೂ ಮೊದಲು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು. ಇಷ್ಟೇ ಅಲ್ಲ, ರಾಹುಲ್‌ಗೆ ಇಂಡಿಯಾ ಎ ವಿರುದ್ಧ ಆರಂಭಿಕ ಅವಕಾಶ ಸಿಕ್ಕಿತು, ಆದರೆ ಇಲ್ಲಿಯೂ ಅವರ ಬ್ಯಾಟ್‌ನಿಂದ ರನ್‌ಗಳು ಬರಲಿಲ್ಲ. ನವೆಂಬರ್ 24, 25 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ರಾಹುಲ್ ಮೇಲೆ ಯಾವ ತಂಡ ದೊಡ್ಡ ಬಿಡ್ ಮಾಡುತ್ತದೆ ಎಂಬುದು ಈಗ ಆಸಕ್ತಿದಾಯಕವಾಗಿದೆ.