ಬರೋಬ್ಬರಿ 500 ವರ್ಷಗಳ ಬಳಿಕ ಶ್ರೀರಾಮ ಹುಟ್ಟಿದ, ಆಳಿದ ಅದೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ.
23ರಿಂದ ಸಾರ್ವಜನಿಕರಿಗೆ ರಾಮ ಮಂದಿರ ಮುಕ್ತವಾಗಲಿದೆ. ಇದೀಗ ಜನವರಿ ಆರಂಭದಿಂದಲೇ ಆಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದೆ. ಈಗಾಗಲೇ ಮಂತ್ರಾಕ್ಷತೆ ಪೂಜೆ ನೆರವೇರಿದೆ. ಇದೀಗ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ ಸೇರಿದಂತೆ ಬರೋಬ್ಬರಿ 8,000 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಸಂತರು, ಧಾರ್ಮಿಕ ಮುಖಂಡರು ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಇದೀಗ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಗೆ ಆಮಂತ್ರಣ ನೀಡಲಾಗಿದೆ.
ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್‌ಗೆ ಈಗಾಲೇ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಮಂತ್ರಣ ನೀಡಲಾಗಿದೆ. ಸಚಿನ್ ತೆಂಡೂಲ್ಕರ್ ಕುಟುಂಬ ಸಮೇತ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ.
ಇತ್ತ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಕೂಡ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 22ಕ್ಕೆ ಯಾವುದೇ ಸರಣಿ ಇಲ್ಲ. ಜನವರಿ 25 ರಿಂದ ಭಾರತ ಇಂಗ್ಲೆಂಡ್ ಸರಣಿ ಆರಂಭಗೊಳ್ಳಲಿದೆ. ಹೀಗಾಗಿ ಕೊಹ್ಲಿ ಕೂಡ ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸಚಿನ್ ಹಾಗೂ ಕೊಹ್ಲಿ ಇಬ್ಬರೂ ದೇವಸ್ಥಾನ ಭೇಟಿ, ಪೂಜೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಆದರೆ ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಸಚಿನ್ ಹಾಗೂ ಕೊಹ್ಲಿ ಪಾಲ್ಗೊಳ್ಳುತ್ತಿರುವುದು ರಾಮ ಭಕ್ತರ ಉತ್ಸಾಹ ಮತ್ತಷ್ಟು ಹೆಚ್ಚಿಸಿದೆ.
ಪ್ರಾಣ ಪ್ರತಿಷ್ಠೆಯಲ್ಲಿ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ದೇಶದ ಹಳ್ಳಿ ಹಳ್ಳಿಗೆ ರಾಮ ಮಂದಿರ ಉದ್ಘಾಟನೆ ಆಮಂತ್ರಣ ನೀಡಲಾಗಿದೆ. ದೇಶದ ಮೂಲೆ ಮೂಲೆ ರಾಮ ಮಂದಿರದಲ್ಲಿ ನಡೆದ ಮಂತ್ರಾಕ್ಷತೆ ಪೂಜಾ ಕೈಂಕರ್ಯದ ಪ್ರಸಾದ ಹಂಚಲಾಗುತ್ತಿದೆ.