ಅಂಡರ್-19 ವಿಶ್ವಕಪ್ ಫೈನಲ್‌: ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿ ಚೊಚ್ಚಲ ಶತಕ ಚಚ್ಚಿದ ವೈಭವ್ ಸೂರ್ಯವಂಶಿ! ಸಿಕ್ಸರ್‌ನಲ್ಲೂ ಹೊಸ ದಾಖಲೆ

Published : Feb 06, 2026, 02:49 PM IST

ಹರಾರೆ: 2026ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಭಾರತ ಭರ್ಜರಿ ಆರಂಭ ಪಡೆದಿದೆ. ಇದರ ಜತೆಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಚೊಚ್ಚಲ ಅಂಡರ್-19 ವಿಶ್ವಕಪ್ ಶತಕ ಸಿಡಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. 

PREV
16
ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಫೈಟ್

ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

26
ಚೊಚ್ಚಲ ಅಂಡರ್-19 ವಿಶ್ವಕಪ್ ಸಿಡಿಸಿದ ಸೂರ್ಯವಂಶಿ

ಫೈನಲ್‌ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿತ್ತು. ಇದೀಗ ನಿರೀಕ್ಷೆಯಂತೆಯೇ ಫೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ ತಾವಾಡುತ್ತಿರುವ ಚೊಚ್ಚಲ ಅಂಡರ್-19 ವಿಶ್ವಕಪ್ ಫೈನಲ್‌ ಅನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

36
ಆರಂಭಿಕ ಆಘಾತದ ಬಳಿಕ ಆಯುಷ್-ಸೂರ್ಯವಂಶಿ ಶತಕದ ಜತೆಯಾಟ

ಹೌದು, ಸೆಮಿಫೈನಲ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಆರೋನ್ ಜಾರ್ಜ್‌ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ವೈಭವ್ ಸೂರ್ಯವಂಶಿ ಹಾಗೂ ನಾಯಕ ಆಯುಷ್ ಮಾಥ್ರೆ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ.

46
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ

ಮೊದಲ 20 ಎಸೆತಗಳಲ್ಲಿ ಕೇವಲ 23 ರನ್ ಗಳಿಸಿದ್ದ ವೈಭವ್ ಸೂರ್ಯವಂಶಿ, ಆ ಬಳಿಕ ಮೈದಾನಕ್ಕೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ಪರಿಣಾಮ ಕೇವಲ 32 ಎಸೆತಗಳಲ್ಲಿ ವೈಭವ್ ಆಕರ್ಷಕ ಅರ್ಧಶತಕ ಸಿಡಿಸಿದರು. ಇದಾದ ಬಳಿಕವೂ ವೈಭವ್ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸಿದರು.

56
ಕೇವಲ 55 ಎಸೆತಗಳಲ್ಲಿ ಚೊಚ್ಚಲ ಅಂಡರ್-19 ವಿಶ್ವಕಪ್ ಶತಕ ಸಿಡಿಸಿದ ಸೂರ್ಯವಂಶಿ

ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸೂರ್ಯವಂಶಿ, ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು.

66
ಅಂಡರ್-19 ವಿಶ್ವಕಪ್‌ನಲ್ಲಿ ಸಿಕ್ಸರ್ ಬಾರಿಸುವಲ್ಲಿ ಹೊಸ ವಿಶ್ವದಾಖಲೆ

ಇನ್ನು 17ನೇ ಓವರ್‌ ಬೌಲಿಂಗ್ ಮಾಡಲಿಳಿದ ಫರ್ಹಾನ್ ಅಹಮದ್ ಎದುರು ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 22 ರನ್ ಚಚ್ಚಿದರು. ಇನ್ನು ಇದಷ್ಟೇ ಅಲ್ಲದೇ ಅಂಡರ್ 19 ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೈಭವ್ ಪಾಲಾಗಿದೆ. ಸದ್ಯ ವೈಭವ್ 23 ಸಿಕ್ಸರ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೊದಲು 2022ರ ವಿಶ್ವಕಪ್‌ನಲ್ಲಿ ಡೆವಾಲ್ಡ್ ಬ್ರೆವೀಸ್ 18 ಸಿಕ್ಸರ್ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories