ವಡೋದರಾ: 2026ನೇ ಸಾಲಿನ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಆರ್‌ಸಿಬಿ ಅಭಿಮಾನಿಗಳು ಹೃದಯ ಗೆಲ್ಲುವಂತ ಮಾತುಗಳನ್ನಾಡಿದ್ದಾರೆ.
ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿಗೆ WPL ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಟ್ರೋಫಿ ಮತ್ತೊಮ್ಮೆ ಮರಿಚಿಕೆಯಾಗಿ ಪರಿಣಮಿಸಿದೆ.
26
ಡೆಲ್ಲಿ ಕ್ಯಾಪಿಟಲ್ಸ್-ಆರ್‌ಸಿಬಿ ರೋಚಕ ಫೈನಲ್
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರೋಡ್ರಿಗಸ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇನ್ನು ಈ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ ನಾಯಕಿ ಸ್ಮೃತಿ ಮಂಧನಾ ಹಾಗೂ ಜಾರ್ಜಿಯಾ ವೋಲ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗು ಬೀರುವಲ್ಲಿ ಯಶಸ್ವಿಯಾಗಿದೆ.
36
ಹ್ಯಾಟ್ರಿಕ್ ಟ್ರೋಫಿ ಗೆದ್ದ ಆರ್‌ಸಿಬಿ ಫ್ರಾಂಚೈಸಿ
ಆರ್‌ಸಿಬಿ ಫ್ರಾಂಚೈಸಿಯು ಇದೀಗ ಕಳೆದ ಮೂರು ವರ್ಷಗಳಲ್ಲಿ ಮೂರು ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. 2024ರಲ್ಲಿ ನಡೆದ ಎರಡನೇ ಸೀಸನ್ WPL ಟೂರ್ನಿಯಲ್ಲಿ ಆರ್‌ಸಿಬಿ ಮೊದಲ ಸಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಕಳೆದ ವರ್ಷ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ಮತ್ತೆ WPLನಲ್ಲಿ ಸ್ಮೃತಿ ಮಂಧನಾ ಪಡೆ ಟ್ರೋಫಿ ಗೆಲ್ಲುವ ಮೂಲಕ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ನೀಡಿದೆ.
ಇದೀಗ ಫ್ರಾಂಚೈಸಿ ಲೀಗ್ ಕ್ರಿಕೆಟ್ ಇತಿಹಾಸದಲ್ಲೇ ಪುರುಷ ಹಾಗೂ ಮಹಿಳಾ ತಂಡಗಳು ಏಕಕಾಲದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಇದೇ ವೇಳೆ ನಾಯಕಿ ಸ್ಮೃತಿ ಮಂಧನಾ, ಈ ಗೆಲುವನ್ನು ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳಿಗೆ ಅರ್ಪಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
56
ಆರ್‌ಸಿಬಿ ಫ್ಯಾನ್ಸ್ ಜಗತ್ತಿನ ಅತ್ಯುತ್ತಮ ಫ್ಯಾನ್ಸ್ ಎಂದ ಸ್ಮೃತಿ
ಎರಡನೇ ಬಾರಿ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಮಂಧನಾ, ನನ್ನ ಪ್ರಕಾರ ಆರ್‌ಸಿಬಿ ಫ್ಯಾನ್ಸ್ ಜಗತ್ತಿನ ಅತ್ಯುತ್ತಮ ಫ್ಯಾನ್ಸ್ ಎಂದು ಬಣ್ಣಿಸಿದ್ದಾರೆ. ನಾವು ಎಲ್ಲೇ ಆಡಿದರೂ ತುಂಬಾ ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನಾವು ಏನೇ ಮಾಡಿದರೂ ಅದು ನಮ್ಮ ಫ್ಯಾನ್ಸ್‌ಗಾಗಿ ಎಂದು ಮಂಧನಾ ಹೇಳಿದ್ದಾರೆ.
66
ಈ ಸಲ ಕಪ್ ನಮ್ದು 2
ಇನ್ನು ಇಡೀ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಬಳಿಕ ಮತ್ತೆ ಕೊನೆಯಲ್ಲಿ ಸ್ಮೃತಿ ಮಂಧನಾ, ಟ್ರೋಫಿ ಹಿಡಿಯುವ ಮುನ್ನ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ತಂಡವನ್ನು ಹುರಿದುಂಬಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಇದು ನಿಮಗಾಗಿಯೇ. ನಾನು ಎರಡನೇ ಸೀಸನ್‌ನಲ್ಲಿ ಅಂದ್ರೆ 2024ರಲ್ಲಿ ಹೇಳಿದ್ದೇ, ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಸಲ ಕಪ್ ನಮ್ದು 2 ಎಂದು ಸ್ಮೃತಿ ಮಂಧನಾ ಗುಡುಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.