ಕ್ಯಾಪ್ಟನ್‌ ಕೂಲ್‌ಗೂ ಬಂದಿತ್ತು ಸಿಟ್ಟು: ಭಾರತ-ಪಾಕಿಸ್ತಾನ ನಡುವಿನ ಈ ಫೈಟ್‌ಗಳು ನಿಮಗೆ ನೆನಪಿವೆಯಾ..?

First Published Oct 19, 2021, 6:39 PM IST

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ.  ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕಿಸ್ತಾನ (Pakistan) ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ-ಪಾಕಿಸ್ತಾನ ಪಂದ್ಯವೆಂದರೆ ಅದೊಂದು ರೀತಿಯ ಹೈವೋಲ್ಟ್‌ ಪಂದ್ಯ. ಕೆಲವೊಮ್ಮೆ ಮೈದಾನದಲ್ಲಿ ಆಟಗಾರರ ನಡುವೆ ವಾಗ್ವಾದ ನಡೆದದ್ದೂ ಇದೆ. ನಾವಿಂದು ಇಂಡೋ-ಪಾಕ್‌ನ ಅಂತಹ 7 ಹೈವೋಲ್ಟೇಜ್ ಪಂದ್ಯಗಳನ್ನು ಮೆಲುಕು ಹಾಕೋಣ ಬನ್ನಿ...

ಕಪಿಲ್ ದೇವ್‌ & ಮಜೀದ್‌ ಖಾನ್‌ (1978)

ಭಾರತ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್‌ ಹಾಗೂ ಪಾಕಿಸ್ತಾನ ಬ್ಯಾಟ್ಸ್‌ಮನ್‌ ಮಜೀದ್ ಖಾನ್ ನಡುವೆ 1978ರಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಭಾರತ ವಿರುದ್ದ ಪಾಕಿಸ್ತಾನ ತಂಡವು ಎರಡನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು 25 ಓವರ್‌ಗಳಲ್ಲಿ 125 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಬೌಂಡರಿ ಬಾರಿಸಬಾರದೆಂದು ಕಪಿಲ್‌ ದೇವ್‌ ಪಾಕಿಸ್ತಾನದ ಮಜೀದ್‌ಗೆ ನಿರಂತರವಾಗಿ ಲೆಗ್‌ ಸೈಡ್‌ಗೆ ಬೌಲಿಂಗ್‌ ಮಾಡತೊಡಗಿದರು. ಬೌಂಡರಿ ಬಾರಿಸಲು ಸಾಧ್ಯವಾಗದ್ದಕ್ಕೆ ಮಜೀದ್‌ಗೆ ಸಿಟ್ಟು ನೆತ್ತಿಗೇರಿತ್ತು. ಬಳಿಕ ಲೆಗ್‌ ಸ್ಟಂಪ್ ಕಿತ್ತು ದೂರವಿಟ್ಟು, ಈಗ ಲೆಗ್‌ ಸ್ಟಂಪ್ ಚೆನ್ನಾಗಿದೆ ಬೌಲಿಂಗ್ ಮಾಡು ಎಂದರು. ಆಗ ಇಬ್ಬರು ಆಟಗಾರರ ನಡುವೆ ಜೋರಾಗಿ ಮಾತಿನ ಚಕಮಕಿ ನಡೆದಿತ್ತು.
 

ಕಿರಣ್ ಮೋರೆ ಮತ್ತು ಜಾವೇದ್ ಮಿಯಾಂದಾದ್‌ (1992)

1992ರಲ್ಲಿ ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವಿಕೆಟ್‌ ಕೀಪರ್ ಕಿರಣ್ ಮೋರೆ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಜಾವೆದ್‌ ಮಿಯಾಂದಾದ್ ಅವರನ್ನು ಒತ್ತಡಕ್ಕೆ ಸಿಲುಕಿಸುವ ಸಲುವಾಗಿ ವಿಕೆಟ್‌ ಹಿಂದೆ ಕೊಂಚ ಜಾಸ್ತಿಯೇ ಅಫೀಲ್‌ ಮಾಡುತ್ತಿದ್ದರು. ಇದು ಜಾವೆದ್ ಮಿಯಾಂದಾದ್‌ಗೆ ಇಷ್ಟವಾಗಲಿಲ್ಲ. ಇದಾದ ಬಳಿಕ ಮಿಯಾಂದಾದ್ ಹಾಗೂ ಮೋರೆ ನಡುವೆ ಮಾತಿನ ಚಕಮಕಿ ನಡೆದಿತ್ತು. 

ಅಮಿರ್ ಸೋಹೆಲ್ ವರ್ಸಸ್ ವೆಂಕಟೇಶ್ ಪ್ರಸಾದ್‌ (1996)

ಇದು ಕೂಡಾ ಕ್ರಿಕೆಟ್‌ ಅಭಿಮಾನಿಗಳಲ್ಲಿ ಅಚ್ಚಳಿಯದೇ ಉಳಿಯುವ ಕ್ಷಣಗಳಲ್ಲಿ ಒಂದು. 1996ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದ ಅಮಿರ್ ಸೋಹೆಲ್‌, ವೆಂಕಟೇಶ್ ಪ್ರಸಾದ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿ ಚೆಂಡು ಹೋದ ಕಡೆ ಮತ್ತೊಂದು ಬೌಂಡರಿ ಬಾರಿಸುವುದಾಗಿ ವೆಂಕಿಗೆ ಸನ್ನೆ ಮಾಡಿದ್ದರು. ಆದರೆ ಮರು ಎಸೆತದಲ್ಲಿ ವೆಂಕಟೇಶ್‌ ಪ್ರಸಾದ್‌ ಪಾಕ್ ಬ್ಯಾಟ್ಸ್‌ಮನ್‌ ಅಮಿರ್ ಸೋಹೆಲ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟಿ ತಮ್ಮ ಕೆಲಸ ಮುಗಿಸಿದರು.
 

ಶಾಹಿದ್ ಅಫ್ರಿದಿ & ಮಹೇಂದ್ರ ಸಿಂಗ್ ಧೋನಿ

ಕ್ಯಾಪ್ಟನ್ ಕೂಲ್‌ ಕೂಡಾ ಒಮ್ಮೆ ಪಾಕಿಸ್ತಾನ ಆಟಗಾರರ ಮೇಲೆ ಗರಂ ಆಗಿದ್ದರು. ಹೌದು, 2005ರಲ್ಲಿ ಪಾಕಿಸ್ತಾನ ವಿರುದ್ದ ಧೋನಿ ಮೂರನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿಳಿಯುವ ಬದಲು ಆರಂಭಿಕನಾಗಿ ಮೈದಾನಕ್ಕಿಳಿದಿದ್ದರು. ಇದನ್ನು ನೋಡಿ ಶಾಹಿದ್ ಅಫ್ರಿದಿ ಕಂಗಾಲಾಗಿ ಹೋದರು. ಅಫ್ರಿದಿ ಬೌಲಿಂಗ್‌ನಲ್ಲಿ ಕವರ್ ಮೇಲೆ ಧೋನಿ ಬೌಂಡರಿ ಬಾರಿಸಿದರು. ಇದು ಅಫ್ರಿದಿ ಸಿಟ್ಟಾಗುವಂತೆ ಮಾಡಿತು ಹಾಗೂ ಸಿಟ್ಟಿನಲ್ಲಿ ಧೋನಿಯನ್ನು ಉದ್ದೇಶಿಸಿ ಏನನ್ನೋ ಹೇಳಿದರು. ಆಗ ಏನೂ ಮಾತನಾಡದ ಧೋನಿ ಮರು ಎಸೆತದಲ್ಲೇ ಸಿಕ್ಸರ್‌ ಚಚ್ಚಿ ಅಫ್ರಿದಿ ಬಾಯಿ ಮುಚ್ಚಿಸಿದರು.
 

ಗೌತಮ್ ಗಂಭೀರ್ ಮತ್ತು ಕಮ್ರಾನ್ ಅಕ್ಮಲ್‌ (2010)

2010ರ ಏಷ್ಯಾಕಪ್ ಟೂರ್ನಿಯ ವೇಳೆ ಪಾಕಿಸ್ತಾನದ ವಿಕೆಟ್‌ ಕೀಪರ್ ಕಮ್ರಾನ್ ಅಕ್ಮಲ್ ಹಾಗೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ನಡುವೆ ಭಾರೀ ವಾಗ್ವಾದ ನಡೆದಿತ್ತು. ಸಯೀದ್ ಅಜ್ಮಲ್‌ ಬೌಲಿಂಗ್‌ನಲ್ಲಿ ಗಂಭೀರ್ ಬೀಟ್‌ ಮಾಡುತ್ತಿದ್ದರು. ಆಗೆಲ್ಲಾ ಅಕ್ಮಲ್‌ ವಿಕೆಟ್ ಹಿಂದೆ ನಿಂತು ಜೋರಾಗಿ ಅಫೀಲ್ ಮಾಡುತ್ತಿದ್ದರು. ಇದು ಗಂಭೀರ್‌ಗೆ ಇಷ್ಟವಾಗಲಿಲ್ಲ. ಡ್ರಿಂಕ್ಸ್‌ ಬ್ರೇಕ್‌ ವೇಳೆಗೆ ಗಂಭೀರ್ ಹಾಗೂ ಅಕ್ಮಲ್ ನಡುವೆ ಜೋರಾದ ವಾಗ್ವಾದ ನಡೆದು ಹೋಯಿತು. 
 

ಶೋಯೆಬ್ ಅಖ್ತರ್ ಮತ್ತು ಹರ್ಭಜನ್‌ ಸಿಂಗ್ (2010)

2010ರ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಭಾರತ ಗೆಲ್ಲಲು ಕೊನೆಯ 7 ಎಸೆತಗಳಲ್ಲಿ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಅಖ್ತರ್ ಬ್ಯಾಟಿಂಗ್ ಮಾಡುತ್ತಿದ್ದ ಹರ್ಭಜನ್‌ ಸಿಂಗ್‌ಗೆ ಕಿರಿಕಿರಿಯನ್ನುಂಟು ಮಾಡುವ ಎಸೆತವನ್ನು ಹಾಕಿ ಕೆಣಕಿದರು. ಇದೇ ವೇಳೆ ಈ ಇಬ್ಬರು ಆಟಗಾರರ ನಡುವೆ ಮೈದಾನದಲ್ಲೇ ವಾಗ್ವಾದ ಏರ್ಪಟ್ಟಿತು. ಬಳಿಕ ಮರು ಎಸೆತದಲ್ಲೇ ಭಜ್ಜಿ ಆಕರ್ಷಕ ಸಿಕ್ಸರ್ ಚಚ್ಚಿ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟಿದ್ದರು.
 

ಇಶಾಂತ್ ಶರ್ಮಾ ಹಾಗೂ ಕಮ್ರಾನ್ ಅಕ್ಮಲ್‌ (2012)

2012ರಲ್ಲಿ ನಡೆದ ಟಿ20 ಪಂದ್ಯದಲ್ಲಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಕಮ್ರಾನ್ ಅಕ್ಮಲ್ ಔಟ್ ಆಗುವುದರಿಂದ ಬಚಾವ್ ಆಗಿದ್ದರು. ಯಾಕೆಂದರೆ ಆ ಬಾಲ್ ನೋ ಬಾಲ್ ಆಗಿತ್ತು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಮರು ಎಸೆತದಲ್ಲಿ ಇಶಾಂತ್ ಶರ್ಮಾ ಅಕ್ಮಲ್‌ಗೆ ಟಾಂಗ್ ಕೊಟ್ಟರು. ಮತ್ತೆ ಈ ಇಬ್ಬರು ಆಟಗಾರರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿತ್ತು.
 

click me!