ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಬಿಹಾರಿ ಮೂಲದ ಇಬ್ಬರು ಕಾರ್ಮಿಕರು ಸೇರಿದಂತೆ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಪಾಕ್ ಮೂಲದ ಭಯೋತ್ಪಾದನಾ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಹಾರ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತ ಈ ಪಂದ್ಯವನ್ನು ಆಡದಂತೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗಲಾರಂಭಿಸಿದೆ.
ind vs pak
ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 24ಕ್ಕೆ ನಿಗದಿಯಾಗಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು ಮಾಡಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದರು. ಸಾಮಾಜಿಕ ತಾಣಗಳಲ್ಲೂ ಪಂದ್ಯ ರದ್ದುಗೊಳಿಸುವಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದು ದಶಕಗಳೇ ಕಳೆದಿವೆ. ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಭಯೋತ್ಫಾದನೆಗೆ ಸದಾ ಕುಮ್ಮಕ್ಕು ನೀಡುವ ಹಾಗೂ ಭಾರತದ ವಿರುದ್ದ ಸದಾ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ವಿರುದ್ದ ಕ್ರಿಕೆಟ್ ಪಂದ್ಯವನ್ನಾಡುವ ಅಗತ್ಯ ಭಾರತಕ್ಕಿಲ್ಲ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸುತ್ತೇವೆ. ಆದರೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ಸ್ಪಷ್ಟಪಡಿಸಿದ್ದಾರೆ.
‘ಉಗ್ರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಗೊಳ್ಳುವ ಅಗತ್ಯವಿದೆ. ಆದರೆ ಭಾರತ-ಪಾಕ್ ಪಂದ್ಯ ರದ್ದು ಮಾಡಲು ಆಗಲ್ಲ. ಐಸಿಸಿ ಟೂರ್ನಿಯಲ್ಲಿ ನಮ್ಮ ಬದ್ಧತೆಯಿಂದ ಹೊರಬಂದು ಯಾವುದೇ ದೇಶದ ವಿರುದ್ಧ ಆಡುವುದಿಲ್ಲ ಎಂದು ಹೇಳುವಂತಿಲ್ಲ. ಐಸಿಸಿಯ ಟೂರ್ನಿಯಲ್ಲಿ ಆಡಲೇಬೇಕು’ ಎಂದಿದ್ದಾರೆ.