ಮುಂಬರುವ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಯಕ ಕೊಹ್ಲಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡ ದಿನ ಬೆಳಗಾಗುವಷ್ಟರಲ್ಲಿ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.
ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಟಿ20 ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ಘೋಷಣೆ ಮಾಡಿದ್ದರು. ಇದೇ ವೇಳೆ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದರು.
ವಿರಾಟ್ ಕೊಹ್ಲಿ ತಮ್ಮನ್ನು ತಂಡದಲ್ಲಿ ಅಭದ್ರತೆಯ ವಾತವರಣಕ್ಕೀಡಾಗುವಂತೆ ಮಾಡಿದ್ದಾರೆಂದು ಬಿಸಿಸಿಐ ಕಾರ್ಯದರ್ಶಿಗೆ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪತ್ರ ಬರೆದಿದ್ದಾರೆ ಎಂದು IANS ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ಜೂನ್‌ನಲ್ಲಿ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಟಗಾರರು ಗೆಲ್ಲುವ ಛಲವನ್ನೇ ತೋರಲಿಲ್ಲ ಎಂದು ಅಶ್ವಿನ್ ಆರೋಪಿಸಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಟೆಸ್ಟ್ ಚಾಂಪಿಯನ್‌ಶಿಪ್ ಬಳಿಕ ಇಂಗ್ಲೆಂಡ್ ವಿರುದ್ದ ನಡೆದ ನಾಲ್ಕೂ ಟೆಸ್ಟ್ ಪಂದ್ಯಗಳಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು ಎಂದು ಹೇಳಲಾಗಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ಯುಜುವೇಂದ್ರ ಚಹಲ್‌ಗೆ ಮಣೆಹಾಕಬೇಕು ಎಂದು ವಿರಾಟ್ ಕೊಹ್ಲಿ ಆಯ್ಕೆ ಸಮಿತಿ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದರ ಹೊರತಾಗಿಯೂ ಅಶ್ವಿನ್‌ಗೆ ಆಯ್ಕೆ ಸಮಿತಿ ಮಣೆ ಹಾಕಿದೆ
ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಏಕದಿನ ನಾಯಕತ್ವದಿಂದಲೂ ವಿರಾಟ್ ಕೊಹ್ಲಿಯನ್ನೂ ಕೆಳಗಿಳಿಸಿ, ಉಪನಾಯಕ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ಸೀಮಿತ ಓವರ್‌ಗಳ ನಾಯಕ ಪಟ್ಟ ಕಟ್ಟಲಾಗುತ್ತದೆ ಎನ್ನುವ ವದಂತಿಯೂ ಇದೆ.