ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ಕೊನೆಯ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 64 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಜಯಿಸಿದೆ.
ಇದರ ಬೆನ್ನಲ್ಲೇ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಸದ್ಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದ ಫಲಿತಾಂಶ ಏನೇ ಬಂದರೂ, ಟೀಂ ಇಂಡಿಯಾ ಅಗ್ರಕ್ರಮಾಂಕಕ್ಕೆ ಯಾವುದೇ ಅಪಾಯವಿಲ್ಲ.
ಇನ್ನು ಇದಷ್ಟೇ ಅಲ್ಲದೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಸತತ ಮೂರನೇ ಬಾರಿಗೆ ಟೆಸ್ಟ್ ವಿಶ್ವಕಪ್ ಫೈನಲ್ ಆಡುವ ನಿರೀಕ್ಷೆಯಲ್ಲಿದೆ.
ಟೆಸ್ಟ್ ಶ್ರೇಯಾಂಕದಲ್ಲಿ ಟೀಂ 122 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡವು 5 ರೇಟಿಂಗ್ ಅಂಕ ಕಮ್ಮಿಯಿದ್ದು ಎರಡನೇ ಸ್ಥಾನದಲ್ಲಿದೆ. ಇನ್ನು ಇಂಗ್ಲೆಂಡ್ ತಂಡವು 111 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇನ್ನು ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ 121 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 118 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇನ್ನು ಟಿ20 ಕ್ರಿಕೆಟ್ ಶ್ರೇಯಾಂಕದಲ್ಲೂ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯ ಟೀಂ ಇಂಡಿಯಾ 266 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 256 ರೇಟಿಂಗ್ ಅಂಕ ಹೊಂದಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.
ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಟೆಸ್ಟ್, ಏಕದಿನ ಹಾಗೂ ಟಿ20 ಶ್ರೇಯಾಂಕ ಹೀಗೆ ಟೀಂ ಇಂಡಿಯಾ 4 ವಿವಿಧ ಕೆಟೆಗರೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.