ಕೊನೆಗೂ ಗಂಭೀರ್ ಆ 'ಡಿಮ್ಯಾಂಡ್' ಒಪ್ಪಿಕೊಂಡ ಬಿಸಿಸಿಐ..! ಟೀಂ ಇಂಡಿಯಾ ಹೆಡ್‌ ಕೋಚ್ ಘೋಷಣೆಗೆ ಕ್ಷಣಗಣನೆ

First Published | Jun 17, 2024, 11:43 AM IST

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗುವ ಮುನ್ನ ಬಿಸಿಸಿಐ ಮುಂದೆ ಒಂದು ಬೇಡಿಕೆಯಿಟ್ಟಿದ್ದರು. ಆ ಡಿಮ್ಯಾಂಡ್ ಅನ್ನು ಬಿಸಿಸಿಐ ಒಪ್ಪಿಕೊಂಡಿದೆ. ಏನದು ಡಿಮ್ಯಾಂಡ್? ಗಂಭೀರ್, ಕೋಚ್ ಆಗಿ ಘೋಷಿಸುವುದು ಯಾವಾಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 
 

ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗುವುದು ಬಹುತೇಕ ಖಚಿತ ಎನಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ವರದಿಯಾಗಿದೆ.

ಕಳೆದೊಂದು ತಿಂಗಳಿನಿಂದಲೂ ಟೀಂ ಇಂಡಿಯಾ ಹೆಡ್ ಕೋಚ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಲೇ ಬಂದಿದೆ. ಆದರೆ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ನೇಮಕವಾಗಬಹುದು ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

Latest Videos


ಸದ್ಯ ಅಮರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಡೆಯುತ್ತಿದ್ದು, ಈ ಚುಟುಕು ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್‌ ಅವರೊಂದಿಗಿನ ಕಾಂಟ್ರ್ಯಾಕ್ಟ್ ಕೂಡಾ ಮುಕ್ತಾಯವಾಗಲಿದೆ.

ಇನ್ನು ದೈನಿಕ್ ಬಾಸ್ಕರ್ ವರದಿಯ ಪ್ರಕಾರ, ಗೌತಮ್ ಗಂಭೀರ್‌ಗೆ ಟೀಂ ಇಂಡಿಯಾ ಹೆಡ್ ಕೋಚ್ ಆಗಲು ಬಿಸಿಸಿಐ ಆಫರ್ ನೀಡಿತ್ತು. ಅದನ್ನು ಗಂಭೀರ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕೋಚ್ ಅಧಿಕಾರ ಸ್ವೀಕರಿಸುವ ಮುನ್ನ ಬಿಸಿಸಿಐ ಮುಂದೆ ಗಂಭೀರ್ ಕೆಲವೊಂದು ಡಿಮ್ಯಾಂಡ್ ಇಟ್ಟಿದ್ದರು.

"ನಾವು ಈಗಾಗಲೇ ಗೌತಮ್ ಗಂಭೀರ್ ಜತೆ ಈ ಕುರಿತಾಗಿ ಮಾತುಕತೆ ನಡೆಸಿದ್ದೇವೆ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ರಾಹುಲ್ ಸ್ಥಾನವನ್ನು ಗೌತಮ್ ಗಂಭೀರ್ ತುಂಬಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ದೈನಿಕ್ ಬಾಸ್ಕರ್ ವರದಿ ಮಾಡಿದೆ.

ಇನ್ನು ತಾವು ಟೀಂ ಇಂಡಿಯಾ ಕೋಚ್ ಆಗಬೇಕೆಂದರೆ, ತಮಗೆ ಬೇಕಾದ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ತಮಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಬಿಸಿಸಿಐ ಮುಂದೆ ಗೌತಮ್ ಗಂಭೀರ್ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ ಅವರ ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದ್ದು, ಈ ತಿಂಗಳಾಂತ್ಯದ ವೇಳೆಗೆ ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಹೆಸರನ್ನು ಬಿಸಿಸಿಐ ಘೋಷಿಸಲಿದೆ ಎಂದು ವರದಿಯಾಗಿದೆ.

ರವಿಶಾಸ್ತ್ರಿ ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿದ್ದಂತೆಯೇ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಬದಲಿಗೆ ವಿಕ್ರಂ ರಾಥೋಡ್ ನೇಮಕವಾಗಿದ್ದರು. ಇನ್ನು ರಾಹುಲ್ ದ್ರಾವಿಡ್ ಕೋಚ್ ಆದಾಗಲೂ ವಿಕ್ರಂ ರಾಥೋಡ್ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಸದ್ಯ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಪರಾಸ್ ಮಾಂಬ್ರೆ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲಿಪ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಗಂಭೀರ್, ಕೇವಲ ಸಹಾಯಕ ಸಿಬ್ಬಂದಿಗಳನ್ನು ಮಾತ್ರವಲ್ಲದೇ ತಂಡದಲ್ಲೂ ಮೇಜರ್ ಸರ್ಜರಿಗೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.

ಗೌತಮ್ ಗಂಭೀರ್ 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸುವ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

click me!