ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾದ ಪ್ರಮುಖ ಆಟಗಾರ: ಪಾಕ್‌ ವಿರುದ್ಧದ ಪಂದ್ಯಕ್ಕೆ ಡೌಟ್‌!

First Published | Oct 10, 2023, 11:02 AM IST

ಭಾರತದ ಮುಂದಿನ ಪ್ರಮುಖ ಪಂದ್ಯ ಪಾಕಿಸ್ತಾನದ ವಿರುದ್ಧ ಇದ್ದು, ಆ ಪಂದ್ಯ ಗೆಲ್ಲಲು ಸಹ ಪ್ಲ್ಯಾನ್‌ ಮಾಡ್ತಿದೆ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆ ಇದೆ. 

ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಆರಂಭವಾಗಿದ್ದು, ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇನ್ನು, ಭಾರತದ ಮುಂದಿನ ಪ್ರಮುಖ ಪಂದ್ಯ ಪಾಕಿಸ್ತಾನದ ವಿರುದ್ಧ ಇದ್ದು, ಆ ಪಂದ್ಯ ಗೆಲ್ಲಲು ಸಹ ಪ್ಲ್ಯಾನ್‌ ಮಾಡ್ತಿದೆ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆ ಇದೆ. 

ಹೌದು, ಭಾರತದ ಬ್ಯಾಟರ್ ಹಾಗೂ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡೆಂಗ್ಯೂನಿಂದ ಬಳಲುತ್ತಿರೋ ಶುಭ್‌ಮನ್‌ ಗಿಲ್‌ ಅವರ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ದೆಹಲಿಗೆ ಹೊರಡುವ ಮೊದಲು ಅವರ ಪರಿಸ್ಥಿತಿ ಹೀಗಿದ್ದ ಕಾರಣ ಆಟಗಾರನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Tap to resize

 ಶುಭ್‌ಮನ್‌ ಗಿಲ್‌ ಅವರ ಪ್ಲೇಟ್ಲೆಟ್ ಕುಸಿದಿದೆ ಮತ್ತು ಅವರನ್ನು ಮುಂಜಾಗ್ರತಾ ಕ್ರಮವಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿಸಿಐನ ವೈದ್ಯಕೀಯ ತಂಡವೂ ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆ, ಶುಭ್‌ಮನ್‌ ಗಿಲ್‌ ದೆಹಲಿಗೆ ತೆರಳುವುದಿಲ್ಲ ಮತ್ತು ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದೂ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಖಚಿತಪಡಿಸಿದೆ.

 "ಟೀಂ ಇಂಡಿಯಾ ಬ್ಯಾಟರ್ ಶುಭ್‌ಮನ್‌ ಗಿಲ್ ಅವರು ತಂಡದೊಂದಿಗೆ 9ನೇ ಅಕ್ಟೋಬರ್ 2023 ರಂದು ದೆಹಲಿಗೆ ಪ್ರಯಾಣಿಸುವುದಿಲ್ಲ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತಂಡದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡ ಆರಂಭಿಕ ಆಟಗಾರ ಅಕ್ಟೋಬರ್ 11 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧದ ಮುಂದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಅವರು ಚೆನ್ನೈನಲ್ಲಿ ಉಳಿಯುತ್ತಾರೆ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ" ಎಂದು ಬಿಸಿಸಿಐ ಈಗಾಗಲೆ ಹೇಳಿಕೆ ನೀಡಿದೆ.

ಕಳೆದ 12 ತಿಂಗಳುಗಳಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ಶುಭ್‌ಮನ್‌ ಗಿಲ್‌ ODI ವಿಶ್ವಕಪ್‌ನಲ್ಲಿ ಭಾರತ ತಂಡದ ದೊಡ್ಡ ಭಾಗವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ಪಂದ್ಯಕ್ಕೆ ಮುಂಚೆಯೇ ಡೆಂಗ್ಯೂ ಕಾಣಿಸಿಕೊಂಡ ಕಾರಣ ಪಂದ್ಯದಲ್ಲಿ ಆಡಲಿಲ್ಲ. ಹಾಗೆ, ಎರಡನೇ ಪಂದ್ಯದಲ್ಲೂ ಆಡುತ್ತಿಲ್ಲ ಎಂಬುದು ಖಚಿತವಾಗಿದೆ. 
 

ಈ ಇತ್ತೀಚಿನ ಬೆಳವಣಿಗೆಯು ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳನ್ನು ಉಂಟುಮಾಡುತ್ತದೆ.

ಶುಭ್‌ಮನ್‌ ಗಿಲ್ ಅನುಪಸ್ಥಿತಿಯಲ್ಲಿ, ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಮತ್ತೊಮ್ಮೆ ಇನ್ನಿಂಗ್ಸ್ ತೆರೆಯುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಇಬ್ಬರೂ ಆರಂಭಿಕ ಆಟಗಾರರು ಶೂನ್ಯಕ್ಕೆ ಔಟಾಗಿದ್ದರು. ಇದು 200 ರನ್‌ಗಳನ್ನು ಚೇಸ್‌ ಮಾಡಲು ಹೊರಟಿದ್ದ ಭಾರತ ತಂಡವನ್ನು ಆತಂಕಕ್ಕೀಡು ಮಾಡಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
 

Latest Videos

click me!