T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್

First Published Oct 25, 2021, 4:54 PM IST

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ (ind vs Pak) 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ (Team India) ಪಾಕಿಸ್ತಾನದ ಎದುರು ಸೋಲಿನ ಕಹಿಯುಂಡಿದೆ. ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳು ಬೇಸರದಿಂದಾಗ ಭಾರತದಲ್ಲಿನ ಕೆಲವು ಪಾಕ್‌ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಂತವರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಖಡಕ್ ಉತ್ತರ ನೀಡಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ವಿರುದ್ದ 10 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿದೆ. ಭಾರತದೆದುರು ಪಾಕ್ ಗೆಲುವು ಸಾಧಿಸುತ್ತಿದ್ದಂತೆ ಪಾಕಿಸ್ತಾನದಲ್ಲಿನ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ

ಆದರೆ ತುಂಬಾ ಕುತೂಹಲಕಾರಿ ಸಂಗತಿಯೆಂದರೆ ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಪಾಕ್ ಪ್ರೇಮಿ ಮನಸ್ಥಿತಿ ಹೊಂದಿದ ಕೆಲವರು ಭಾರತದಲ್ಲೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

Virender Sehwag

ಪಾಕ್‌ ಗೆಲುವಿಗೆ ಭಾರತದ ವಿವಿಧ ಮೂಲೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿರುವ ವೀರೂ, ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಹೀಗಿದ್ದೂ ಕೆಲ ಅಭಿಮಾನಿಗಳ ಬೂಟಾಟಿಕೆಯನ್ನು ವ್ಯಂಗ್ಯ ಮಾಡಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಆದರೆ ನಿನ್ನೆ ದೇಶದ ಕೆಲವೆಡೆ ಪಾಕಿಸ್ತಾನದ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಅವರು ಕ್ರಿಕೆಟ್‌ನ ಗೆಲುವೆಂದು ಸಂಭ್ರಮಿಸಿರಬಹುದು. ಹಾಗಿದ್ರೆ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದರೆ ಏನು ಹಾನಿಯಾಗುತ್ತೆ? ಯಾಕೆ ಈ ರೀತಿಯ ಬೂಟಾಟಿಕೆ? ಇಂತಹ ಸಂದರ್ಭದಲ್ಲೇ ಎಲ್ಲವೂ ನೆನಪಾಗುತ್ತವೆ ಎಂದು ವೀರೂ ಟ್ವೀಟ್ ಮಾಡಿದ್ದಾರೆ.

ವಿಶ್ವಕಪ್ ಟೂರ್ನಿಗಳಲ್ಲಿ ಭಾರತದೆದುರು ಸಾಲು ಸಾಲು ಸೋಲುಗಳನ್ನು ಕಂಡಿದ್ದ ಪಾಕಿಸ್ತಾನ ತಂಡವು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಏಕದಿನ ಹಾಗೂ ಟಿ20 ವಿಶ್ವಕಪ್ ಸೇರಿ ಒಟ್ಟು 13ನೇ ಪ್ರಯತ್ನದಲ್ಲಿ ಭಾರತದೆದುರು ಪಾಕಿಸ್ತಾನಕ್ಕೆ ಗೆಲುವು ದಕ್ಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ(57) ಬಾರಿಸಿದ ಆಕರ್ಷಕ ಶತಕ ಹಾಗೂ ರಿಷಭ್ ಪಂತ್(39) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತ್ತು.

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಮೊಹಮ್ಮದ್ ರಿಜ್ವಾನ್ ಅಜೇಯ 79 ರನ್‌ ಬಾರಿಸಿದರೆ, ಬಾಬರ್ ಅಜಂ 68 ರನ್‌ ಚಚ್ಚಿದರು.
 

click me!