ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ವಿರುದ್ದ ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸೋಲಿಗೆ ಶರಣಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ(57) ಬಾರಿಸಿದ ಆಕರ್ಷಕ ಶತಕ ಹಾಗೂ ರಿಷಭ್ ಪಂತ್(39) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತ್ತು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಮೊಹಮ್ಮದ್ ರಿಜ್ವಾನ್ ಅಜೇಯ 79 ರನ್ ಬಾರಿಸಿದರೆ, ಬಾಬರ್ ಅಜಂ 68 ರನ್ ಚಚ್ಚಿದರು.
ಟೀಂ ಇಂಡಿಯಾ ಈ ಸೋಲಿನ ಶಾಕ್‌ನಿಂದ ಹೊರಬಂದಂತೆ ಇಲ್ಲ. ಇದರ ನಡುವೆ ಗಾಯದ ಮೇಲೆ ಬರೆ ಎನ್ನುವಂತೆ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂದಿನ ನ್ಯೂಜಿಲೆಂಡ್ ವಿರುದ್ದ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ ಎನಿಸಿದೆ.
ಹೌದು, ಪಾಕ್ ವಿರುದ್ದ ಬ್ಯಾಟಿಂಗ್ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಭುಜಕ್ಕೆ ಚೆಂಡು ತಗುಲಿದ ಕಾರಣ ಅವರು ನೋವಿನಿಂದ ಬಳಲಿದಂತೆ ಕಂಡು ಬಂದಿತು. ಬಳಿಕ ಕ್ಷೇತ್ರ ರಕ್ಷಣೆ ಮಾಡಲು ಹಾರ್ದಿಕ್ ಪಾಂಡ್ಯ ಮೈದಾನಕ್ಕೆ ಇಳಿಯಲಿಲ್ಲ.
ಹಾರ್ದಿಕ್ ಪಾಂಡ್ಯ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲು ಕರೆದೊಯ್ದಿದ್ದಾಗಿ ಬಿಸಿಸಿಐ ತಿಳಿಸಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಇಶಾನ್ ಕಿಶನ್ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡಲು ಕ್ರೀಸ್‌ಗಿಳಿದಿದ್ದರು.
ಕೆಲ ತಿಂಗಳುಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲೂ ಬೌಲಿಂಗ್ ಮಾಡಿರಲಿಲ್ಲ. ಇದೀಗ ಅಕ್ಟೋಬರ್ 31ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವುದು ಅನುಮಾನ ಎನಿಸಿದೆ.