Team India
ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ಆರಂಭ ಪಡೆಯಲು ವಿಫಲವಾಗಿದೆ. ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಎದುರು ಭಾರತ 10 ವಿಕೆಟ್ ಅಂತರದ ಆಘಾತಕಾರಿ ಸೋಲು ಕಂಡಿದೆ.
ಮೊದಲಿಗೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ, ಇದಾದ ಬಳಿಕ ಬೌಲಿಂಗ್‌ನಲ್ಲೂ ನೀರಸ ಪ್ರದರ್ಶನ ತೋರಿತು. ಹೀಗಾಗಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವು ಪಾಕಿಸ್ತಾನ ಎದುರು ಸೋಲು ಕಂಡಿತು.
ಇದೀಗ ಅಕ್ಟೋಬರ್ 31ರಂದು ನ್ಯೂಜಿಲೆಂಡ್ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಪಂದ್ಯ ಎನ್ನುವಂತಾಗಿದೆ. ಕಿವೀಸ್ ಹಣಿಯಲು ಟೀಂ ಇಂಡಿಯಾ ಸಕಲ ಸಿದ್ದತೆ ಆರಂಭಿಸಿದೆ.
ಹೌದು, ಇದೆಲ್ಲದರ ನಡುವೆ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಿವೀಸ್ ಎದುರಿನ ಪಂದ್ಯಕ್ಕೂ ಮುನ್ನ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ. ಇದಷ್ಟೇ ಅಲ್ಲದೇ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದಾರೆ.
ಟೀಂ ಇಂಡಿಯಾ ವೇಗಿಗಳಾದ ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಜತೆಗೂಡಿ ಹಾರ್ದಿಕ್ ಪಾಂಡ್ಯ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ.
Hardik Pandya
ಹಾರ್ದಿಕ್ ಪಾಂಡ್ಯ ಕಡೆಯ ಬಾರಿಗೆ ಜುಲೈನಲ್ಲಿ ಟೀಂ ಇಂಡಿಯಾ ಲಂಕಾ ಪ್ರವಾಸ ಮಾಡಿದ್ದಾಗ ಬೌಲಿಂಗ್ ಮಾಡಿದ್ದರು. ಇದಾದ ಬಳಿಕ ಯುಎಇನಲ್ಲಿ ನಡೆದ ಐಪಿಎಲ್ ವೇಳೆಯಲ್ಲಿ ಸಹ ಮುಂಬೈ ಇಂಡಿಯನ್ಸ್ ತಂಡದ ಪರ ಬೌಲಿಂಗ್ ಮಾಡಿರಲಿಲ್ಲ.
ಇದೀಗ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಟೀಂ ಇಂಡಿಯಾಗೆ ಮತ್ತಷ್ಟು ಬಲ ಬಂದಂತೆ ಆಗಿದ್ದು, ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್ ಜತೆಗೆ ಆರನೇ ಬೌಲರ್ ರೂಪದಲ್ಲಿ ತಂಡಕ್ಕೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ.
ಇತ್ತೀಚಿಗೆನ ಫಾರ್ಮ್ ಗಮನಿಸಿದರೆ, ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾಗೆ ಆಯ್ಕೆ ಮಾಡಿದ್ದು, ಹಲವರಿಗೆ ಹುಬ್ಬೇರಿಸುವಂತೆ ಮಾಡಿತ್ತು. ಪಾಕಿಸ್ತಾನ ವಿರುದ್ದ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದ ಪಾಂಡ್ಯ 8 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.