ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದು, ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಇದೀಗ ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟಿದೆ.
ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟ 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಸೂಪರ್ 8 ಹಂತದ ಪಂದ್ಯಗಳು, ಭಾರತೀಯ ಕಾಲಮಾನ ಜೂನ್ 19ರ ಸಂಜೆ 8 ಗಂಟೆಯಿಂದ ಆರಂಭವಾಗಲಿದೆ.
ಸೂಪರ್ 8 ಹಂತದ 'ಎ' ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಇನ್ನು 'ಬಿ' ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುಎಸ್‌ಎ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಇನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಸೂಪರ್ 8 ಹಂತದಿಂದ ಸೆಮಿಫೈನಲ್‌ಗೆ ಮತ್ತೊಮ್ಮೆ ಲಗ್ಗೆಯಿಡಲು ಸುವರ್ಣಾವಕಾಶವೊಂದು ಕೂಡಿಬಂದಿದೆ.
ಭಾರತ ಕ್ರಿಕೆಟ್ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕಂತ ಆಟವಾಡಿದರೇ, ಬೆವರು ಹರಿಸದೆಯೇ ಅನಾಯಾಸವಾಗಿ 2024ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಬಹುದು. ಅದು ಹೇಗೆ ನೋಡೋಣ ಬನ್ನಿ.
ಜೂನ್ 20, 2024: ಭಾರತ-ಆಫ್ಘಾನಿಸ್ತಾನ ಫೈಟ್:
ಭಾರತ ತಂಡವು ಬ್ರಿಡ್ಜ್‌ಟೌನ್‌ನಲ್ಲಿ ಆಫ್ಘಾನಿಸ್ತಾನ ಎದುರು ತನ್ನ ಪಾಲಿನ ಮೊದಲ ಸೂಪರ್ 8 ಪಂದ್ಯವನ್ನಾಡಲಿದೆ. ಇದುವರೆಗೂ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಎಂಟು ಬಾರಿಯೂ ಭಾರತವೇ ಗೆದ್ದು ಬೀಗಿದೆ. ಹೀಗಾಗಿ ಭಾರತ ಮತ್ತೊಂದು ಸುಲಭ ಗೆಲುವಿನ ವಿಶ್ವಾಸದಲ್ಲಿದೆ.
ಜೂನ್ 22, 2024: ಭಾರತ-ಬಾಂಗ್ಲಾದೇಶ ಫೈಟ್
ಇನ್ನು ಟೀಂ ಇಂಡಿಯಾ ಸೂಪರ್ 8 ಹಂತದ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಆಂಟಿಗಾದಲ್ಲಿ ನೆರೆಯ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಪಂದ್ಯಗಳಲ್ಲಿ 13 ಬಾರಿ ಮುಖಾಮುಖಿಯಾಗಿದ್ದು, ಭಾರತ 12ರಲ್ಲಿ ಜಯ ಕಂಡಿದೆ. ಹೀಗಾಗಿ ಎರಡನೇ ಪಂದ್ಯ ಕೂಡಾ ಭಾರತಕ್ಕೆ ಸುಲಭ ಹಾದಿಯಾಗಲಿದೆ.
ಜೂನ್ 24, 2024: ಭಾರತ-ಆಸ್ಟ್ರೇಲಿಯಾ ಬಿಗ್ ಫೈಟ್
ಭಾರತ ತಂಡವು ಜೂನ್ 24ರಂದು ಸೇಂಟ್ ಲೂಸಿಯಾದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿದ್ದು ಭಾರತ 19 ಪಂದ್ಯಗಳನ್ನು ಜಯಿಸಿದ್ದರೇ, ಆಸ್ಟ್ರೇಲಿಯಾ 11 ಪಂದ್ಯಗಳನ್ನು ಜಯಿಸಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.
ಒಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮೀಸ್ ಪ್ರವೇಶಿಸಲಿವೆ. ಹೀಗಾಗಿ ಆಫ್ಘಾನ್ ಹಾಗೂ ಬಾಂಗ್ಲಾದೇಶ ಎದುರು ಗೆದ್ದರೇ, ಆಸೀಸ್ ಎದುರಿನ ಫಲಿತಾಂಶ ಏನೇ ಬಂದರೂ ಟೀಂ ಇಂಡಿಯಾ ಯಾವುದೇ ಆತಂಕವಿಲ್ಲದೇ ಸೆಮೀಸ್ ಪ್ರವೇಶಿಸಲಿದೆ.