ಒಟ್ಟು 20 ತಂಡಗಳು ಪಾಲ್ಗೊಂಡಿದ್ದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 12 ತಂಡಗಳು ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದು, ಇದೀಗ ಕೇವಲ 8 ತಂಡಗಳು ಮಾತ್ರ ಪ್ರಶಸ್ತಿ ರೇಸ್‌ನಲ್ಲಿ ಉಳಿದುಕೊಂಡಿವೆ.
ಚುಟುಕು ಕ್ರಿಕೆಟ್‌ನ ಬಲಾಢ್ಯ ತಂಡಗಳಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿವೆ.
ಇನ್ನು ಅಚ್ಚರಿ ಎನ್ನುವಂತೆ ಟೂರ್ನಿಗೆ ಆತಿಥ್ಯ ವಹಿಸಿರುವ ಕ್ರಿಕೆಟ್ ಶಿಶು ಯುಎಸ್‌ಎ ತಂಡವು ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುವ ಮೂಲಕ ಸೂಪರ್ 8 ಹಂತಕ್ಕೆ ಲಗ್ಗೆಯಿಡಲಿವೆ.
ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟ 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಸೂಪರ್ 8 ಹಂತದ ಪಂದ್ಯಗಳು, ಭಾರತೀಯ ಕಾಲಮಾನ ಜೂನ್ 19ರ ಸಂಜೆ 8 ಗಂಟೆಯಿಂದ ಆರಂಭವಾಗಿವೆ.
ಸೂಪರ್ 8 ಹಂತದ 'ಎ' ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಇನ್ನು 'ಬಿ' ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುಎಸ್‌ಎ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಸೂಪರ್ 8 ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮೀಸ್ ಪ್ರವೇಶಿಸಿದರೆ, ಎರಡು ಗುಂಪಿನ ತಲಾ ಎರಡು ತಂಡಗಳು ಸೂಪರ್ 8 ಹಂತದಲ್ಲೇ ತಮ್ಮ ಅಭಿಯಾನ ಮುಗಿಸಲಿವೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸುವ ತಂಡಗಳು ಯಾವುವು ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಹರಿಣಗಳ ತಂಡದ ಮಾಜಿ ವೇಗಿ ಡೇಲ್ ಸ್ಟೇನ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಸ್ಟೇನ್ ಭವಿಷ್ಯ ನುಡಿದಿದ್ದಾರೆ.
ಆದರೆ ಅಚ್ಚರಿ ಎನ್ನುವಂತೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸುವುದಿಲ್ಲ ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಗ್ರೂಪ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಭೀತಿಗೆ ಸಿಲುಕಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅದೃಷ್ಟದ ಸಹಾಯದೊಂದಿಗೆ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದ್ದು, ಈಗಾಗಲೇ ಸೂಪರ್ 8 ಹಂತದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದಿದೆ.