ಸನ್ ರೈಸರ್ಸ್ ಮಾಲೀಕಿ ಕಾವ್ಯ ಮಾರನ್ ಅವರಂತೆ, ಶಾರೂಖ್ ಖಾನ್ ಮಾಲೀಕತ್ವದ ಟ್ರಿನಿಬಾಗೋ ನೈಟ್ ರೈಡರ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಾಗಿ ಪಾಕಿಸ್ತಾನಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಉಳಿಸಿಕೊಂಡಿದೆ.
ಬೆಂಗಳೂರು: ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಎಷ್ಟೇ ರಾಜಕೀಯ ಉದ್ವಿಗ್ನತೆ ಇದ್ದರೂ, ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯ ಮಾಲೀಕತ್ವದ ತಂಡಗಳು ಪಾಕಿಸ್ತಾನಿ ಆಟಗಾರರನ್ನು ಸೆಳೆಯುವುದು ಮುಂದುವರಿಯುತ್ತಿದೆ. ಇತ್ತೀಚೆಗಷ್ಟೇ ಸನ್ ರೈಸರ್ಸ್ ಹೈದರಾಬಾದ್ ಮಾಲೀಕಿ ಕಾವ್ಯ ಮಾರನ್ ಅವರ ನಡೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಮಾಲೀಕತ್ವದ ಟ್ರಿನಿಬಾಗೋ ನೈಟ್ ರೈಡರ್ಸ್ (TKR) ಕೂಡ ಅದೇ ಹಾದಿ ತುಳಿದಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಕಾವ್ಯ ಮಾರನ್ ಒಡೆತನದ 'ಸನ್ ರೈಸರ್ಸ್ ಲೀಡ್ಸ್' ತಂಡವು ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಗಾಗಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಭಾರತೀಯ ಉದ್ಯಮಿಗಳ ತಂಡದಲ್ಲಿ ಪಾಕ್ ಆಟಗಾರನಿಗೆ ಸ್ಥಾನ ನೀಡಿದ್ದು ದೊಡ್ಡ ಮಟ್ಟದ ವಿವಾದ ಮತ್ತು ಚರ್ಚೆಗೆ ಕಾರಣವಾಗಿತ್ತು. ಈಗ ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2026) ಗಾಗಿ ಶಾರೂಖ್ ಖಾನ್ ಅವರ ಟ್ರಿನಿಬಾಗೋ ನೈಟ್ ರೈಡರ್ಸ್ ತಂಡವು ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ರೀಟೈನ್ (ತಂಡದಲ್ಲೇ ಉಳಿಸಿಕೊಳ್ಳುವುದು) ಮಾಡಿಕೊಂಡಿದೆ.
23
ಯಾರು ಈ ಉಸ್ಮಾನ್ ತಾರಿಕ್?
ಉಸ್ಮಾನ್ ತಾರಿಕ್ ಕಳೆದ ಸಿಪಿಎಲ್ ಸೀಸನ್‌ನಲ್ಲಿ ಟ್ರಿನಿಬಾಗೋ ನೈಟ್ ರೈಡರ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟಿ ಕೆ ಆರ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ತಾರಿಕ್ ಪಾತ್ರ ದೊಡ್ಡದಿತ್ತು. ಸಿಪಿಎಲ್‌ನ 10 ಪಂದ್ಯಗಳಲ್ಲಿ 13.95ರ ಸರಾಸರಿಯಲ್ಲಿ ಒಟ್ಟು 20 ವಿಕೆಟ್ ಕಬಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. 2026ರ ಟಿ20 ವಿಶ್ವಕಪ್‌ನಲ್ಲೂ ಪಾಕಿಸ್ತಾನ ಪರ ಆಡಿದ್ದ ಇವರು, 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು.
ವಿವಾದಕ್ಕೆ ಕಾರಣವೇಕೆ?
ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಯಿಂದಾಗಿ ಐಪಿಎಲ್‌ನಲ್ಲಿ ಪಾಕ್ ಆಟಗಾರರಿಗೆ ನಿಷೇಧವಿದೆ. ಶಾರೂಖ್ ಖಾನ್ ಮತ್ತು ಕಾವ್ಯ ಮಾರನ್ ಅಂತಹ ಐಪಿಎಲ್ ತಂಡಗಳ ಮಾಲೀಕರು ವಿದೇಶಿ ಲೀಗ್‌ಗಳಲ್ಲಿ ಪಾಕ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯಲ್ಲಿ ಶಾರೂಖ್ ಅವರ ಕೆಕೆಆರ್ ತಂಡ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿತ್ತು. ಈಗ ಪಾಕ್ ಆಟಗಾರನನ್ನು ಉಳಿಸಿಕೊಂಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
33
ಮತ್ಯಾರನ್ನ ಖರೀದಿಸಿದ್ದಾರೆ ಶಾರೂಖ್
ಉಸ್ಮಾನ್ ತಾರಿಕ್ ಮಾತ್ರವಲ್ಲದೆ, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮುನ್ರೋ ಅವರನ್ನು ಟಿಕೆಆರ್ ರೀಟೈನ್ ಮಾಡಿಕೊಂಡಿದೆ. ತಂಡದ ಕೋರ್ ಗ್ರೂಪ್‌ನಲ್ಲಿ ವಿಂಡೀಸ್ ದಿಗ್ಗಜರಾದ ಕೀರಾನ್ ಪೊಲಾರ್ಡ್, ನಿಕೋಲಸ್ ಪೂರನ್, ಸುನಿಲ್ ನರೈನ್ ಮತ್ತು ಅಕೀಲ್ ಹೊಸೈನ್ ಇದ್ದಾರೆ. ದಕ್ಷಿಣ ಆಫ್ರಿಕಾದ ಮ್ಯಾಥ್ಯೂ ಬ್ರೀಟ್ಜ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಸಿಪಿಎಲ್ 2026ರ ಆಗಸ್ಟ್ 8 ರಂದು ಟ್ರಿನಿಬಾಗೋ ನೈಟ್ ರೈಡರ್ಸ್ ತನ್ನ ಮೊದಲ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.