ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕಳೆದ ಫೆಬ್ರವರಿ 17ರಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪತ್ನಿ ಡೇನಿಯಲ್ಲೆ ಕೂಡಾ ಸಾಥ್ ನೀಡಿದ್ದರು.
ಎಬಿ ಡಿವಿಲಿಯರ್ಸ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ಡೇನಿಯಲ್ಲೆ ಡಿವಿಲಿಯರ್ಸ್ ಕೂಡಾ ವಿಶೇಷ ರೀತಿಯಲ್ಲಿ ಶುಭಕೋರಿದ್ದರು. ಡೇನಿಯಲ್ಲೆ ಓರ್ವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.
ಎಬಿ ಡಿವಿಲಿಯರ್ಸ್ ಹಾಗೂ ಡೇನಿಯಲ್ಲೆ 2007ರಲ್ಲಿ ಮೊದಲ ಬಾರಿಗೆ ಹೋಟೆಲ್‌ವೊಂದರಲ್ಲಿ ಊಟ ಮಾಡುವಾಗ ಮುಖಾಮುಖಿಯಾಗಿದ್ದರು. ಮೊದಲ ನೋಟದಲ್ಲೇ ಎಬಿಡಿ, ಡೇನಿಯಲ್ಲೆಗೆ ಕ್ಲೀನ್ ಬೌಲ್ಡ್ ಆಗಿ ಹೋದರು.
ಎಬಿ ಡಿವಿಲಿಯರ್ಸ್ ಅವರ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಡೇನಿಯಲ್ಲೆ ತಮ್ಮ ಅದ್ಭುತ ಮ್ಯೂಸಿಕ್ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದರು. ಇದಾದ ಬಳಿಕವಂತೂ ಎಬಿಡಿ, ಡೇನಿಯಲ್ಲೆಗೆ ಫಿದಾ ಆಗಿ ಹೋದರು.
ಹಲವು ವರ್ಷಗಳ ಡೇಟಿಂಗ್ ಬಳಿಕ 2012ರಲ್ಲಿ ಪ್ರೇಮಸೌಧ ತಾಜಮಹಲ್‌ನಲ್ಲಿ ಎಬಿ ಡಿವಿಲಿಯರ್ಸ್ ತಮ್ಮ ಮನದನ್ನೇ ಡೇನಿಯಲ್ಲೆಗೆ ಪ್ರೇಮ ನಿವೇದನೆ ಮಾಡಿದರು. ಎಬಿಡಿ ಹೃದಯವೈಶಾಲ್ಯಕ್ಕೆ ಮನಸೋತಿದ್ದ ಡೇನಿಯಲ್ಲೆಗೆ ಸಮ್ಮತಿಸದೇ ಇರಲು ಬೇರೆ ಆಯ್ಕೆಯೇ ಇರಲಿಲ್ಲ.
ಇದಾಗಿ ಎರಡು ವರ್ಷಗಳ ಬಳಿಕ ಅಂದರೆ 2013ರ ಮಾರ್ಚ್ 30ರಂದು ಅಬ್ರಹಂ ಬೆಂಜಮಿನ್ ಡಿವಿಲಿಯರ್ಸ್ ಹಾಗೂ ಡೇನಿಯಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ 10 ವರ್ಷಗಳಿಂದ ಜತೆಜತೆಯಾಗಿಯೇ ಸಂಸಾರ ನೌಕೆಯಲ್ಲಿ ಬಾಳು ಸಾಗಿಸುತ್ತಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಎಬಿ ಡಿವಿಲಿಯರ್ಸ್ ತಾವು ಮೊದಲ ಬಾರಿಗೆ ಡೇನಿಯಲ್ಲೆಯವರನ್ನು ಭೇಟಿಯಾಗಿದ್ದ ಹೋಟೆಲ್‌ನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಮೊದಲ ಭೇಟಿಯ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡಿದ್ದಾರೆ.
ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಎಬಿ ಡಿವಿಲಿಯರ್ಸ್, ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯ ಜತೆ ತುಂಬು ಕುಟುಂಬದ ಖುಷಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಬೆಂಬಲಿಗರಾಗಿರುವ ಎಬಿ ಡಿವಿಲಿಯರ್ಸ್ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ಆಡಲಿರುವ ಮೊದಲ ಪಂದ್ಯದ ಸಂದರ್ಭದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾಜರಿರಲಿದ್ದಾರೆ.