ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್‌ಗೆ ಬಿಗ್ ಶಾಕ್‌..! ಮಾರಕ ವೇಗಿ ಟೂರ್ನಿಯಿಂದಲೇ ಔಟ್

First Published | Nov 3, 2023, 1:59 PM IST

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತವು ನಿರ್ಣಾಯಕಘಟ್ಟದತ್ತ ಸಾಗುತ್ತಿದೆ. ಹೀಗಾಗಿ ಪ್ರತಿ ಪಂದ್ಯದ ಫಲಿತಾಂಶ ಸೆಮೀಸ್‌ ಹಾದಿಯನ್ನು ಮತ್ತಷ್ಟು ರೋಚಕತೆಗೊಳಿಸುತ್ತಿವೆ. ಹೀಗಿರುವಾಗಲೇ ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದು ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಮೂರು ಸ್ಥಾನಕ್ಕಾಗಿ ಉಳಿದ ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಇನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ನ್ಯೂಜಿಲೆಂಡ್ ತಂಡವು ಇದೀಗ ಹ್ಯಾಟ್ರಿಕ್ ಸೋಲು ಅನುಭವಿಸಿ ಅಂತಿಮ ನಾಲ್ಕರ ಘಟ್ಟದಿಂದ ಹೊರಬೀಳುವ ಭೀತಿಗೆ ಸಿಲುಕಿದೆ.

Tap to resize

ಹೀಗಿರುವಾಗಲೇ ಕಳೆದ ಆವೃತ್ತಿಯ ರನ್ನರ್ ಅಪ್ ಕಿವೀಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ತಂಡದ ಮಾರಕ ವೇಗಿ ಮ್ಯಾಟ್ ಹೆನ್ರಿ, ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

31 ವರ್ಷದ ಮಾರಕ ವೇಗಿ ಮ್ಯಾಟ್ ಹೆನ್ರಿ, ಕಿವೀಸ್ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೆ ಪುಣೆಯಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ವೇಳೆ ಗಾಯಗೊಂಡು ಮೈದಾನ ತೊರೆದಿದ್ದರು.

ಇದಾದ ಬಳಿಕ ಎಂಆರ್‌ಐ ಸ್ಕ್ಯಾನ್ ಮಾಡಿಸಿದ ಬಳಿಕ ಮ್ಯಾಟ್ ಹೆನ್ರಿಗೆ ಎರಡನೇ ಹಂತದ ಲೋವರ್ ಟಿಯರ್ ಆಗಿರುವುದು ಖಚಿತವಾಗಿದೆ. ಹೀಗಾಗಿ ಈ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ 2 ರಿಂದ 4 ವಾರಗಳ ಅಗತ್ಯವಿರುವುದಾಗಿ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
 

ಮ್ಯಾಟ್ ಹೆನ್ರಿ ಸಾಕಷ್ಟು ಸಮಯದಿಂದ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ನಮ್ಮ ತಂಡದ ಪ್ರಮುಖ ಆಟಗಾರರಾಗಿದ್ದರು. ಅವರೀಗ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿರುವುದು ನಮಗೆ ಬೇಸರವನ್ನುಂಟು ಮಾಡಿದೆ ಎಂದು ಕಿವೀಸ್ ಹೆಡ್‌ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
 

ಅವರು ಕಳೆದ ಕೆಲ ವರ್ಷಗಳಿಂದ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದು, ಐಸಿಸಿ ಬೌಲರ್‌ಗಳ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುತ್ತಾ ಬಂದಿದ್ದಾರೆ. ಅವರ ಅನುಭವವನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಗ್ಯಾರಿ ಸ್ಟೆಡ್ ಹೇಳಿದ್ದಾರೆ. 

ಇದೀಗ ಮ್ಯಾಟ್ ಹೆನ್ರಿ ಬದಲಿಗೆ ನೀಳಕಾಯದ ವೇಗಿ ಕೈಲ್ ಜೇಮಿಸನ್‌ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಕೂಡಿಕೊಂಡಿದ್ದಾರೆ. ಭಾರತೀಯ ಪಿಚ್‌ನಲ್ಲಿ ಅಪಾಯಕಾರಿಯಾಗುವ ಸಾಮರ್ಥ್ಯವಿರುವ ಜೇಮಿಸನ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ನ್ಯೂಜಿಲೆಂಡ್ ತಂಡವು ನವೆಂಬರ್ 04ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಉಭಯ ತಂಡಗಳಿಗೆ ಸಾಕಷ್ಟು ಮಹತ್ವದ್ದಾಗಿದ್ದು, ಮತ್ತೊಂದು ಜಿದ್ದಾಜಿದ್ದಿನ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

Latest Videos

click me!